Pages

Saturday 7 June 2014

KAVANA - ನಾಗರಿಕತೆ ಸಾಯಬೇಕು-

ಹಸಿರಾಗಬೇಕು ಈ ಕಾಡು..
ನನ್ನ ಮುತ್ತಾತರು ಹುಟ್ಟಿ ಬೆಳೆದು
ಬದುಕು ಸವೆಸಿದ ಈ ಕಾಡು..
ಆಧುನಿಕ ಮಾನವನ ಅಭಿವೃದ್ಧಿಯ ತೃಷೆಗೆ
ನಲುಗಿ ಹೋದ ನನ್ನವರ ಕಾಡು..

ರುದ್ರ ರಮಣೀಯ ದಟ್ಟ ಕಾಡುಗಳು ಹಸಿರಾಗಬೇಕು..
ಅವಿರಳವಾದ ತಂಪು ಮರಗಳು ಚೈತನ್ಯಯುತವಾಗಬೇಕು..
ತಂಪು ನೆರಳ ತೇಜೊವನ ಮೈದಳೆಯಬೇಕು..
ಹಸಿರು ಸಮೃದ್ಧದ ಕಾನನಧಾಮವಾಗಬೇಕು ಈ ಕಾಡು...

ಬೆಳೆಯಬೇಕು ಹಸಿರು.. ಕೊಡಲಿಗೂ ಜಾಗವಿಲ್ಲದಂತೆ - ನಂಜು ಬಳ್ಳಿಗಳು..
ನೆಲದೊಡಲ ಒಣ ಎಲೆಗಳು ಹಸಿರಾಗಬೇಕು - ಹುಲು ಮಾನವನ ಕಾಡ್ಗಿಚ್ಚ ಬೆಂಕಿಗೆ ಆಹುತಿಯಾಗದಂತೆ..
ಜಿಟಿ ಜಿಟಿ ವರ್ಷಧಾರೆ ವರುಷಧಾರೆಯಾಗಿ ಸುರಿಯಬೇಕು..

ಅಲ್ಲೊಂದು ಹರಿದ್ವರ್ಣವನ ನಿರ್ಮಾಣವಾಗಬೇಕು..
ಜಿಂಕೆ ನವಿಲುಗಳು ನಲಿಡಾಡಬೇಕು
ಹುಲಿ ಸಿಂಹಗಳು ಘರ್ಜಿಸಬೇಕು.. ಮಾನವ ಓಡಿ ಹೋಗುವಂತೆ ದೈತ್ಯ ಜೀವಿಗಳ ವಿಕಾಸನಹೊಂದಬೇಕು..

ಕಣಜದ ಹೆಜ್ಜೇನುಗಳ ಆಗರವಾಗಬೇಕು..
ವಿಷಕಾರಿ ಹಾವುಗಳ ಠಾವಾಗಬೇಕು ಈ ಕಾಡು..
ಹಕ್ಕಿಗಳ ಕಲರವ ಕರ್ಕಶವಾಗಬೇಕು ಮಾನವ ಹೆದರುವಂತೆ - ಆತನೊಳಗಿನ ನಿರ್ಭಯತೆ ಸಾಯುವಂತೆ..

ಕಾಡನ್ನು ನಾಡಾಗಿಸಿದ ಈ ನಾಗರಿಕತೆ ಸಾಯಲೇಬೇಕು..
ಆ ಹೆಣ ಗೊಬ್ಬರಗಳ ರಾಶಿಯ ಮೇಲೆ - ಕಾಡು ಜನರ ಹಸಿರು ನಾಗರಿಕತೆ ಹುಟ್ಟಬೇಕು..
ಈ ನೆಲ ಹಸಿರಾಗಬೇಕು..
ಹಸಿರು ಉಸಿರಾಗಬೇಕು..


- ಬಿ ಎಸ್ ಹೃದಯ

Sunday 25 May 2014

ಎಚ್ಚಿ ರನ್ನೆರ್? ಸಜ್ಜಿ ರನ್ನೇರ ?!

ಕೊರಗರ ಕೂಡು ಕಟ್ಟಿನಲ್ಲಿ ಅವರದೇ ಆದ ಕಟ್ಟುಕಟ್ಟಳೆಗಳು (ಸಂಪ್ರದಾಯ) ಇದೆ. ಅವುಗಳಲ್ಲಿ ಸತ್ಕಾರ ಮತ್ತು ಉಪಚಾರವೂ ಒಂದು. ಮನೆಗೆ ಬಂದ ನೆಂಟರು ಅಥವಾ ಬೀಗರನ್ನು ಬರಮಾಡಿ ಕೊಳ್ಳುವುದು ಹಾಗೂ ಕ್ಷೇಮ ಸಮಚಾರಗಳನ್ನು ವಿಚಾರಿಸುವುದರಲ್ಲಿ ವಿಶಿಷ್ಟತೆ ಇದೆ.
ಮನೆಯ ಅಂಗಳಕ್ಕೆ ಕಾಲಿಡುವಾಗಲೇ ಬಂದ ನೆಂಟರಿಷ್ಟರು... 'ಬಿನ್ನೆರ್ ಬತ್ತೆರ್...' ಎಂದು ನಗು ಗಾಂಭೀರ್ಯದ ಮಾತಿನಿಂದ ಪ್ರವೇಶ ಕೇಳಿದಾಗ, 'ಬಲೆ ಬಲೆ ಜಾಲ್ಗೆ ಬಲೆ...' ಎಂದು ಅನುಮತಿ ನೀಡಿ, ಮೊದಲು ಅವರಿಗೆ ಕಾಲು ತೊಳೆಯಲು ಒಂದು ತಂಬಿಗೆ ನೀರು ಕೊಟ್ಟ - ಕೂರಲು ಮಣೆಯೋ ಚಾಪೆಯೋ ಹಾಸಿ ದಣಿವು ತಗ್ಗಿಸುವಂತೆ ಮತ್ತು ದಾಹ ತೀರಿಸಲು ನೀರು ಕೊಡುವುದು ವಾಡಿಕೆ.
ಮುಂದುವರಿದು... 'ನೀವು ಮತ್ತು ಮನೆಯವರು ಹೇಗಿದ್ದಾರೆ..? ಚೆನ್ನಾಗಿದ್ದಾರ..?' ಎಂದು ಕ್ಷೇಮ ಸಮಚಾರ ಕೇಳುತ್ತಾರೆ ಮನೆಯವರು. ಅದಕ್ಕವರು.., 'ನಿಮ್ಮ ಮತ್ತು ನಮ್ಮ ಹಿರಿಯರ ದಯೆಯಿಂದ ಸೌಖ್ಯ'ವೆಂದು ಹೇಳುತ್ತಾರೆ. ಪರಸ್ಪರ ಕೈಮುಗಿದು ನಮಸ್ಕಾರ ಸಲ್ಲಿಸುತ್ತಾರೆ. ಕೂಡಲೆ ವೀಳ್ಯದೆಲೆ ವಿನಿಮಯವೂ ನಡೆದು ಬಾಯಿ ಕೆಂಪಾಗುತ್ತದೆ.
ದನದ ಮಾಂಸ (ಒಣಗಿದ ಮಾಂಸ ಯಾ ಹಸಿ ಮಾಂಸ)ದ ಪದಾರ್ಥದೊಂದಿಗೆ ಊಟಕ್ಕೆ ಸಜ್ಜಾಗುತ್ತಾರೆ.
ಇಂಥ ಕೆಲವು ಸನ್ನಿವೇಶಗಳು ನೋಡಲು - ಅನುಭವಿಸಲು ಈ ಕಾಲದಲ್ಲಿ ಮತ್ತು ಇನ್ನು ಮುಂದಿನ ಕಾಲದಲ್ಲಿ ಸಾಧ್ಯವಿಲ್ಲ! ಕನಸು ಕಾಣಬಹುದಷ್ಟೇ! ಅಥವಾ ಕಳೆದು ಹೋದ ಆ ದಿನಗಳನ್ನು ನೆನಪು ಮಾಡಬಸಹುದಷ್ಟೇ! ಎಚ್ಚಿ ರನ್ನೆರ್..?(ಹೇಗಿದ್ದೀರ?) ಸಜ್ಜಿ ರನ್ನೆರ...?! (ಚೆನ್ನಾಗಿದ್ದೀರಾ?)


- ಹೃದಯ

Wednesday 14 May 2014

ವಿನಾಶದ ಅಂಚಿನಲ್ಲಿ ಕೊರಗ ಜನಾಂಗ

ಆದಿವಾಸಿ ಬುಡಕಟ್ಟು ಪಂಗಡದ ಕೊರಗ ಜನಾಂಗದವರು ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಚದುರಿ ಹೋಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಕೊರಗ ಸಮುದಾಯದ ಈಗಿರುವ ಒಟ್ಟು ಜನಸಂಖ್ಯೆ ಬರೇ ಹದಿನಾರು ಸಾವಿರ ಎಂದು ಸಮಗ್ರ ಗ್ರಾಮೀಣ ಆಶ್ರಮ(ರಿ)ದ ಕಾರ್ಯಕರ್ತರೊಬ್ಬರು ಬೊಟ್ಟು ಮಾಡಿ ಖೇದ ವ್ಯಕ್ತಪಡಿಸುತ್ತಾರೆ. ಅಂದರೆ, ಒಟ್ಟು ಶೇಕಡವಾರು ಸಂಖ್ಯೆಯ ಮುಂದೆ ಕೊರಗ ಜನಾಂಗದ ಜನಸಂಖ್ಯೆಯು ಮೈನಸ್ ಪಾಯಿಂಟ್ ಗೆ ತಲುಪಿದೆ. ಒಟ್ಟಾರೆ ತಮ್ಮ ಜನಾಂಗದ ಉಳಿವಿಗಾಗಿಯೇ ಕೊರಗ ಸಮುದಾಯವು ಹೋರಾಡುವ ನಿರ್ಗತಿಕ ಸ್ಥಿತಿಯೊಂದು ಉದ್ಭವವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ (ಬ್ರಿಟಿಷ್ ಆಡಳಿತದ ದಾಖಲೆಗಳ ಪ್ರಕಾರ) ಆಗಿನ ಕೊರಗರ ಒಟ್ಟು ಜನಸಂಖ್ಯೆ 55,000 ಆಗಿತ್ತು ಸ್ವಾತಂತ್ರ್ಯ ನಂತರ ಭಾರತ ಸರಕಾರ ನಡೆಸಿದ ಜನಗಣತಿಯಲ್ಲಿ ಕೊರಗ ಸಮುದಾಯದ ಜನಸಂಖ್ಯೆಯು 35,000 ಸಾವಿರಎಂದು ತಿಳಿದುಬಂದಿತ್ತು. ಕೊರಗರ ಜನಸಂಖ್ಯೆಯ ಅನುಪಾತ ಕುಸಿತವನ್ನು 1992ರಲ್ಲಿ ಮನಗಾಣಿಸಲಾಗಿತ್ತು. ಆ ಸಮಯದಲ್ಲಿ ನಡೆಸಿದ ಜನಸಂಖ್ಯಾ ಸಮೀಕ್ಷೆಯಲ್ಲಿ ಕೊರಗರ ಜನಸಂಖ್ಯೆ22,000ಕ್ಕೆ ಕುಸಿದಿತ್ತು. 2004ರಲ್ಲಿ ಇನ್ನಷ್ಟು ಕುಸಿತ ಕಂಡು ಕೊರಗರ ಜನಸಂಖ್ಯೆ 18,000ಕ್ಕೆ ಇಳಿದಿತ್ತು ಎಂಬುದನ್ನು ಕೊರಗ ಸಮುದಾಯದ ಹಿರಿಯ ಮುಖಂಡರೊಬ್ಬರು ಅಂಕಿಅಂಶಗಳನ್ನು ತೆರೆದಿಡುತ್ತಾರೆ. ಒಟ್ಟಾರೆ ಕಳೆದ 60 ವರ್ಷಗಳಲ್ಲಿ ಕೊರಗ ಸಮುದಾಯವು ಗಂಭೀರ ವಿನಾಶದೆಡೆಗೆ ಸಾಗಿದೆ.

ಎಂಜಲನ್ನದ ಪ್ರಭಾವವೇ..?
ಅನಿಷ್ಠ ಅಜಲು ಚಾಕರಿಗೆ ಒಳಪಟ್ಟ ಈ ಸಮುದಾಯವು ಗಂಭೀರವಾಗಿ ಅಜಲುವಿನ ದುಷ್ಪರಿಣಾಮವನ್ನು ಈಗಲೂ ಎದುರಿಸುತ್ತಿದೆ. ಶತಮಾನಕ್ಕೂ ಹಿಂದೆ, ಊರಚಾಕರಿ(ಸೇವೆ)ಗಳಿಗೆ ಒಳಪಟ್ಟು, ಸಮಾಜದ ಮುಂದೆ ಹೊಟ್ಟೆ ಪಾಡಿಗಾಗಿ ಕೈಯೊಡ್ಡಬೇಕಾಗಿ ಬಂದಾಗ, ಮೇಲ್ವರ್ಗದ ಸಮುದಾಯ ಬಿಸಾಕಿದ ಎಂಜಲನ್ನವೇ (ಅದನ್ನೇ ತಿಂದು ಬದುಕಬೇಕಾಗಿ ಬಂದ ನಿಕೃಷ್ಠ ಸ್ಥಿತಿ) ಇಂದು ಮಾರಕವಾಗಿ ಪರಿಣಮಿಸಿತೇ? ಸ್ವಾತಂತ್ರ್ಯಪೂರ್ವದಲ್ಲಿ ಆಹಾರದ ಕೊರತೆ ಮತ್ತು ಆಹಾರ ಉತ್ಪಾದನೆಗೆ ಅವಕಾಶವಿಲ್ಲದಿದ್ದಾಗ ಹಸಿವೆಗಾಗಿ ಎಂಜಲನ್ನದ ಭಿಕ್ಷೆ ಮತ್ತು ಅಮಲು ಪದಾರ್ಥಗಳನ್ನು ದಾನವಾಗಿ ಪಡೆದ ದುಶ್ಪರಿಣಾಮವನ್ನು ಇಂದು ಕೊರಗ ಸಮುದಾಯದ ಆರೋಗ್ಯದ ಮೇಲೆ ವಿಪರೀತ ವಂಶವಾಹಿನಿಯಾಗಿ ಪರಿಣಾಮವನ್ನು ಬೀರಿದೆ. ಎಂಜಲನ್ನ ಮುಖಾಂತರ ರೋಗ- ರುಜಿನಗಳನ್ನು ಪಡೆದ ಪರಿಣಾಮ, ಇಂದು ಕೊರಗ ಜನಾಂಗದ ತಲೆಮಾರಿನ ವಂಶಾಭಿವೃದ್ಧಿಯನ್ನು ಕುಂಠಿತಗೊಳಿಸಿದೆ.

ಅನಾರೋಗ್ಯ ಮತ್ತು ದುಃಶ್ಚಟ
ಅಜಲಿನ ಪ್ರಭಾವದಿಂದ, ವಂಶವಾಹಿನಿಯಾಗಿ ಬಂದ ರೋಗಗಳು ( ಅನುವಂಶಿಕ ತೊಂದರೆಗಳು), ರಕ್ತಹೀನತೆ, ಪೋಷಕಾಂಶಗಳ ಕೊರತೆ, ಅಪೌಷ್ಠಿಕ ಆಹಾರ ಮತ್ತು ಅಮಲು ಸೇವನೆಯಂತಹ ದುಃಶ್ಚಟದಿಂದಾಗಿ ಹಾಗು ಗರ್ಭಿಣಿ ಮಹಿಳೆಯರ ಹಾರೈಕೆಯಲ್ಲಿ ಹಿನ್ನಡೆ ಮುಂತಾದ ಕಾರಣಗಳಿಂದಾಗಿಯೂ ಕೊರಗ ಜನಾಂಗದ ವಂಶಾಭಿವೃದ್ಧಿಯನ್ನು ಕುಂಠಿತಗೊಳಿಸಿದೆ. ಸಮಗ್ರ ಗಿರಿಜನ ಕಲ್ಯಾಣಾಭಿವೃದ್ಧಿ(ಐಟಿಡಿಪಿ) ಪೌಷ್ಠಿಕ ಆಹಾರದ ಪ್ಯಾಕೇಜ್ ಗಳನ್ನು (ಮಳೆಗಾಲದಲ್ಲಿ ಮಾತ್ರ!) ವಿತರಿಸುತ್ತಿದ್ದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಕಾಣುತ್ತಿಲ್ಲ. ಕೊರಗರ ಕಾಲೋನಿಯ ಅನೈರ್ಮಲ್ಯ ಪರಿಸರವೂ ಅನಾರೋಗ್ಯಗಳಿಗೆ ಕಾರಣವಾಗಿದೆ. ಅದ್ದರಿಂದಲೇ ಕೊರಗರು ಅಲ್ಪಾಯುಷಿಗಳಾಗಿದ್ದಾರೆ.

ಮತಾಂತರ ಪ್ರಕ್ರಿಯೆಯೂ ಕೊರಗ ಸಮುದಾಯಕ್ಕೆ ಒಂದು ಶಾಪವಾಗಿ ಪರಿಣಮಿಸಿದೆ. ಕ್ಷಯ, ಮಲೇರಿಯಾ, ಪೈಲೇರಿಯಾ, ಕ್ಯಾನ್ಸರ್ ಮುಂತಾದ ಸಾಂಕ್ರಾಮಿಕ ರೋಗಗಳ ಹಾಗು ಹೃದಯ ಸಂಬಂಧಿ ತೊಂದರೆಗಳೂ ಸಮುದಾಯದಲ್ಲಿ ಗಂಭೀರವಾಗಿ ಕಾಡುತ್ತಿದೆ.

ಭೀತಿ ಹಿಟ್ಟಿಸುವ ಸಾವಿನ ಸಂಖ್ಯೆ
ಕೊರಗ ಜನಾಂಗದಲ್ಲಿ ಜನನ ಸಂಖ್ಯೆಗಿಂತಲೂ, ಮರಣ ಹೊಂದುವವರ ಸಂಖ್ಯೆಯೇ ಅಧಿಕವಾಗಿದೆ. ಕಳೆದ ವರ್ಷವೊಂದರಲ್ಲೇ 120ಕ್ಕೂ ಹೆಚ್ಚು ಮಂದಿ ಕೊರಗ ಜನಾಂಗದ ಬಂಧುಗಳು ಸಾವನಪ್ಪಿದ್ದರು. ಇವರೆಲ್ಲರೂ 25ವರ್ಷದಿಂದ 40 ವರ್ಷದೊಳಗಿನವರು ಎಂಬುದು ಇನ್ನೂ ಆಘಾತಕಾರಿ ವಿಷಯ. ಹೀಗೆಯೇ ಮುಂದುವರಿದರೆ, ಮುಂದಿನ 100 ವರ್ಷದಲ್ಲಿ ಕೊರಗ ಜನಾಂಗ ಸಂಪೂರ್ಣ ನಾಶವಾಗಬಹುದೆಂಬ ಬೀತಿ ವ್ಯಕ್ತವಾಗುತ್ತಿದೆ.

ಬಲಿಷ್ಠ ಸಂಘಟನೆ ಮತ್ತು ಕಿವುಡರ ಸರಕಾರ!
ಜಾತಿವಾರು ಸಂಘಟನೆಗಳಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಬಲಿಷ್ಥವಾಗಿದ್ದು, ಸದಾ ಕೊರಗರ ಅಭಿವೃದ್ಧಿ ಪರ ಕೆಲಸಗಳಲ್ಲಿ ಕಾರ್ಯೋನ್ಮುಖವಾಗಿ ಸೇವೆ ಸಲ್ಲಿಸುತ್ತಿದೆ. ಕೊರಗರ ಸಮಗ್ರ ಸಮೀಕ್ಷೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ, ಕಿವುಡರಂತೆ ವರ್ತಿಸುವ ಸರಕಾರದ ಮುಂದೆ ಸಂಘಟನೆಗಳ ಧ್ವನಿಯೂ ಕ್ಷೀಣಿಸಿದಂತೆ ಕಾಣುತ್ತಿದೆ!

ಪರಿಹಾರವೇನು?
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿಲ್ಲವೇ? ಸಮಸ್ಯೆಗಳ ಮೂಲವನ್ನು ಕಂಡೂ ಹಿಡಿಯಲು ಸರಕಾರಗಳಿಗೆ ಮನಸ್ಸಿಲ್ಲವೇ? ದಕ್ಷಿಣ ಆಪ್ರಿಕಾದ ಬುಡಕಟ್ಟು ಪಂಗಡವೊಂದನ್ನು ನಾಶದಂಚಿನಿಂದ ಕಾಪಾಡಲು, ಅಲ್ಲಿನ ಸ್ಥಳೀಯ ಸರಕಾರ, ಜಿನ್ (ವಂಶವಾಹಿನಿ)ಗೆ ಸಂಬಂಧಪಟ್ಟ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿದೆ. ಇಲ್ಲಿಯೂ ಅದೇ ಮಾದರಿಯ ಪರಿಹಾರ ಮಾರ್ಗವನ್ನು ರೂಪಿಸಲು ಸರಕಾರಗಳಿಗೆ ಸಾದ್ಯವಿಲ್ಲವೇ? ಅಥವಾ ಕೊರಗ ಸಮುದಾಯ, ಅಂಡಮಾನಿನ ಶಾಂಪೆನ್ಸ್ ಸಮುದಾಯದಂತೆ ಸರ್ವನಾಶವಾಗಲಿ ಎಂದು ಕಾಯುತ್ತಿದೆಯೇ? ಅಜಲು ನಿಷೇಧ ಜಾರಿಗೊಂಡರೂ, ತೆರೆಮರೆಯಲ್ಲಿ ಅಜಲು ಚಾಕರಿ ಇನ್ನೂ ನಡೆಯುತ್ತಿದೆ ಎಂಬುದನ್ನು ದಾಖಲೆ ಸಮೇತ ಜಿಲ್ಲಾಡಳಿತದ ಮುಂದಿಟ್ಟರೂ, ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಕೊರಗರಿಗೆ ಕೊರಗುವುದೇ ಬದುಕಾಯಿತೇ...?


- ಹೃದಯ

Saturday 3 May 2014

ಯುಜಿಸಿ ಪಾಸಾದ ಕೊರಗ ಸಮುದಾಯದ ಪ್ರಥಮ ಪ್ರತಿಭೆ...

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ನಿದಾನವಾಗಿಯಾದರೂ ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಎನ್ನಬಹುದಾದ ಸಾಧನೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಬಿತಾ ಗುಂಡ್ಮಿ.


ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಗುಂಡ್ಮಿ ಎಂಬಲ್ಲಿ ಜನಿಸಿದ ಸಬಿತಾ, ಬಾಲ್ಯದಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಂಡ ತಬ್ಬಲಿ. ಆದರೆ, ತನ್ನ ದೊಡ್ಡಮ್ಮ ಮತ್ತು ದೊಡ್ಡಪ್ಪನ ಆಸರೆಯಲ್ಲಿ - ಪ್ರೀತಿಯ ಹಾರೈಕೆಯಲ್ಲಿ ಬೆಳೆದ ಸಬಿತಾ, ಬ್ರಹ್ಮಾವರದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು.
ಉಡುಪಿ ಜಿಲ್ಲೆಯ ಮಂಚಕಲ್ ಪೆರ್ನಾಲಿನ ಸಮಗ್ರ ಗ್ರಾಮೀಣ ಆಶ್ರಮ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಜೊತೆಗೆ ಕೆಲಸ ಮಾಡಿಕೊಂಡ ಸಬಿತಾ ತಾನೂ ಕಲಿಯಬೇಕೆಂಬ ಕನಸು ಕಂಡವರು. ಅವರ ಆಕಾಂಕ್ಷೆಗೆ ಸಮಗ್ರ ಗ್ರಾಮೀಣ ಆಶ್ರಮ ಬೆಂಬಲವಾಗಿ ನಿಂತಿತು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದ ಸಬಿತಾ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಸ್ಲೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗುವ ಮೂಲಕ ಕೊರಗ ಸಮುದಾಯದ ಪ್ರಪ್ರಥಮ ಯುಜಿಸಿ ತೇರ್ಗಡೆಗೊಂಡ ಸಾಧಕಿಯೆಂಬ ಕೀರ್ತಿಗೆ ಪಾತ್ರರಾದರು. ಆ ಮೂಲಕ ಒಟ್ಟು ಸಮಾಜ ಕೊರಗ ಬುಡಕಟ್ಟು ಸಮುದಾಯವನ್ನು ಶೈಕ್ಷಣಿಕ ರಂಗದಲ್ಲಿಯೂ ಕಾಣುವಂತಾಯಿತು. ಅಭಿನಂದನೆಗಳು ಸಬಿತಾ...
- ಹೃದಯ

Monday 21 April 2014

ಬುಟ್ಟಿ ಹೆಣೆಯುವ ಕೈಗಳು ಶಿಕ್ಷಣಕ್ಕೆ ಪ್ರೋತ್ಸಾಹವಿತ್ತಾಗ...

ಇದು ಮತ್ತೊಂದು ಸಂತೋಷದ ವಿಷಯ! ದೈಹಿಕವಾಗಿ ಮತ್ತು ಮಾನಸಿಕವಾಗಿ 'ಅಜಲು' ಎಂಬ ಅನಿಷ್ಠ ಮತ್ತು ನಿಷೇದಿತ 'ಬಿಟ್ಟಿ ಚಾಕರಿ' (ಉಚಿತ ಸೇವೆ)ಗೆ ಒಳಪಟ್ಟ ಕೊರಗ ಆದಿವಾಸಿ ಸಮುದಾಯ, ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ - ತಾವೂ ಕೂಡ ಏನನ್ನಾದರೂ ಸಾಧಿಸಬಲ್ಲೆವು ಮತ್ತು ತಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ!

ಬುಟ್ಟಿ ಹೆಣೆಯುವ, ಡೋಲು ಬಡಿಯುವ, ಸಮಾಜದಲ್ಲಿ ತೀರಾ ಕೆಳಮಟ್ಟಕ್ಕೆ ದೂಡಲ್ಪಟ್ಟ ಕೊರಗ ಸಮುದಾಯದ ಹಿರಿಯ ಜೀವಿಗಳು - ತಮ್ಮ ಮಕ್ಕಳು ಯಾವತ್ತೂ ಈ ರೀತಿಯಲ್ಲಿ ಬದುಕಬಾರದೆಂದು ಆಶಿಸಿದವರೇ.
ಅಂತಹುದೇ ಆಸೆ - ಆಕಾಂಕ್ಷೆಗಳನ್ನು ಹೊತ್ತ ಹಿರಿ ಜೀವವೇ ಸುಕ್ರ ಕೊರಗ. ಉಡುಪಿ ಜಿಲ್ಲೆಯ ಕೆಂಜೂರಿನ ಸುಕ್ರ ಕೊರಗ ಎಂಬವರ ಹಿರಿಯ ಮಗ ದೈಹಿಕ ಅನಾನುಕೂಲತೆಗೆ ಒಳಗಾದರೂ ಅವನನ್ನು ಶೇಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದವರು. ಈಗ ಅವರ ಎರಡನೇ ಪುತ್ರನ ಸರದಿ! ಅಣ್ಣ ದಿನಕರ ಕೆಂಜೂರಿನಂತೆ ತಮ್ಮ ದಿನೇಶ್ ಕೂಡ ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕೋಲೇಜ್ನಲ್ಲಿ ಬಿಎಸ್ಡಬ್ಲ್ಯು ಮಾಡಿದ ದಿನೇಶ್, ಮಂಗಳೂರು ವಿವಿಯಲ್ಲಿ ಎಂಎಸ್ಡಬ್ಲ್ಯು ಮುಗಿಸಿ ಯುಜಿಸಿ - ನೆಟ್ ಲೆಕ್ಚರರ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಕೊರಗ ಸಮುದಾಯದಿಂದ ಯುಜಿಸಿ ಪಾಸಾದ ಎರಡನೇ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ.

ಅಪ್ಪನಿಗೆ ಅಕ್ಷರದ ಅರಿವಿಲ್ಲದಿದ್ದರೂ, ತಮ್ಮಿಬ್ಬರು ಮಕ್ಕಳು 'ಅಕ್ಷರದ ಬೆಳಕಾಗುವ' ಮಟ್ಟಕ್ಕೆ ಬೆಳೆಸಿದ್ದಾರೆ. ತಂದೆ ಮಕ್ಕಳಿಗೆ ನಮ್ಮನಿಮ್ಮೆಲ್ಲರ ಪರವಾಗಿ ಪ್ರೀತಿಯ ವಂದನೆ... ಅಭಿನಂದನೆಗಳು...


- ಹೃದಯ

Saturday 12 April 2014

ಪೋಲಿಯೋ ಎಂಬ ಮಹಾಮಾರಿಗೆ ಸವಾಲಾದವರು; ಈಗ ಉಪನ್ಯಾಸಕರು!

ಇವರ ಹೆಸರು ದಿನಕರ ಕೆಂಜೂರು. ಉಡುಪಿ ಜಿಲ್ಲೆಯ ಕೆಂಜೂರಿನ ಕಲ್ಲುಗುಡ್ಡೆಯ ಸುಕ್ರ ಕೊರಗ ಮತ್ತು ಶಾಂತ ದಂಪತಿಯ ಮಕ್ಕಳಲ್ಲಿ ಒಬ್ಬರಾದ ದಿನಕರ ಕೊರಗ ಹುಟ್ಟುತ್ತಲೇ ಪೋಲಿಯೋ ಎಂಬ ಮಹಾಮಾರಿಗೆ ಒಳಗಾದರು. ಹುಟ್ಟು ಬಡತನ, ಕೌಟುಂಬಿಕ ಅನಕ್ಷರತೆ ಮತ್ತು ತನಗೆ ಸವಾಲೆನಿಸಿದ ಪೋಲಿಯೋ ಪೀಡಿತ ಭಿನ್ನ ದೇಹಾಕೃತಿಯನ್ನು ಮೆಟ್ಟಿ ನಿಲ್ಲುತ್ತಲೇ, ಸಾಧನೆಯ ಹಾದಿಯಲ್ಲಿ ಛಲದಂಕಮಲ್ಲನೆನೆಸಿಕೊಂಡವರು.
ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡರೂ ತಮ್ಮ ತಂದೆ, ಇಬ್ಬರು ತಮ್ಮಂದಿರು ಮತ್ತು ಓರ್ವ ತಂಗಿ ಹಾಗೂ 'ಊರುಗೋಲೆಂಬ ಜೀವ ಮಿತ್ರ'ನ ಸಹಾಯದಿಂದಲೇ ಉಡುಪಿ ಜಿಲ್ಲೆಯ ಶ್ರೀ ವೀರೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಬ್ಯಾಸವನ್ನು ಆರಂಭಿಸಿದರು. ಪ್ರೌಡಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರು ಶಿರ್ವದ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದರು. ನಂತರ ಉನ್ನತ ವ್ಯಾಸಾಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೇರ್ಪಡೆಗೊಂಡ ಇವರು ಎಂ.ಕಾಂ ಸ್ನಾತ್ತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡರು.

2009ರಲ್ಲಿ ಮಂಗಳೂರು ವಿವಿ ವಾಣಿಜ್ಯ ಅಧ್ಯಯನ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ಸಾಧಿಸುವ ಛಲದ ಮುಂದೆ ಮಹಾಮಾರಿಯೊಂದು ಅಸಹಾಯಕ ಸ್ಥಿತಿಗೆ ತಲುಪಿದ ಸ್ವಾರಸ್ಯವಿದು!!
ದಿನಕರ ಕೆಂಜೂರು - ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಮತ್ತು ಕೇರಳ ಇದರ ಸಕ್ರೀಯ ಸದಸ್ಯರಾಗಿರುತ್ತಾರೆ. ಇವರನ್ನು ಸಂಪರ್ಕಿಸಬಯಸುವವರು M:94492 81350 ಕರೆ ಮಾಡಬಹುದು.


- ಹೃದಯ

Thursday 3 April 2014

ಕೊರಗ ಭಾಷೆಯ ಕುರಿತು ಭಟ್ಟರಿಂದ ಅಧ್ಯಯನ!



ಶ್ರೇಷ್ಠ ಭಾಷಾತಜ್ಙ, ಸಂಶೋಧಕ ಹಾಗು ಮಾನವತವಾದಿ ಎಂದು ಹೆಗ್ಗಳಿಕೆಗೆ ಪಾತ್ರರಾಗಿರುವ - ಡಾ.ಡಿ.ಎನ್. ಶಂಕರ ಭಟ್ಟರು, ಕೊರಗ ಭಾಷೆಯ ಕುರಿತಾಗಿ ಆಳವಾದ ಅಧ್ಯಯನ ನಡೆಸಿದವರಲ್ಲಿ ಪ್ರಮುಖರಾಗಿದ್ದಾರೆ.
ಕನ್ನಡ ಭಾಷೆ, ವ್ಯಾಕರಣ, ಛಂದಸ್ಸು ಮುಂತಾದ ಅಧ್ಯಯನಶೀಲ ಸಂಶೋಧನೆ ಹಾಗು ತುಳು, ಬೋಡೊ, ಥಂಕರ್, ನಾಗಾ, ಹವ್ಯಕ್ ಮುಂತಾದ ಪ್ರಾದೇಶಿಕ ಮತ್ತು ಬುಡಕಟ್ಟು ಭಾಷೆಗಳ ಕುರಿತಾಗಿಯೂ ಅಧ್ಯಯನ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ - 'ದರ್ಬೆ ನಾರಾಯಣ ಶಂಕರ ಭಟ್ಟ' (D.N.S.BHAT)ರು 15 ಜುಲೈ 1935ರಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು - ಸಂಸ್ಕ್ರತ ವೇದ ಪಂಡಿತರು.
1962ರಲ್ಲಿ ಮದ್ರಾಸು ವಿವಿಯಲ್ಲಿ ಭಾಷಾಶಾಸ್ತ್ರದಲ್ಲಿ ಪಿ.ಹೆಚ್.ಡಿ ಗಳಿಸಿದ ಡಿ.ಎನ್.ಶಂಕರ ಭಟ್ಟರು, 1966ರಲ್ಲಿ ಬ್ರಿಟೀಷ್ ಕೌನ್ಸಿಲ್ ನಲ್ಲಿ 'ಪೆಲೋಶಿಪ್' ಆಯ್ಕೆಯಾಗಿ ಇಂಗ್ಲೀಷ್ನಲ್ಲಿ 'ಉಪಭಾಷಾಪರಿವೀಕ್ಷಣೆಯ ವಿಧಾನ' ಕುರಿತು ಅಧ್ಯಯನ ಮಾಡಿದರು.

1962ರಿಂದ 65ರವರೆಗೆ ಪುಣೆ ವಿವಿದಿಂದ 'ದ್ರಾವಿಡಿಯನ್ ಭಾಷಾಶಾಸ್ತ್ರ'ದ ಅಧ್ಯಯನ,
1965ರಿಂದ 79ರವರೆಗೆ ಪುಣೆ ಡೆಕ್ಕನ್ ಕಾಲೇಜಿನಲ್ಲಿ 'ಟಿಬೆಟ್ ಬರ್ಬನ್' ಭಾಷೆಗಳ ರೀಡರ್ ಆಗಿ ಸೇವೆ ಸಲ್ಲಿಸಿದರು. 1979ರಿಂದ 85ರ ವರೆಗೆ 'ತಿರುವನಂತಪುರ ISDL'ನಲ್ಲಿ ಭಾಷಾ ಅಧ್ಯಾಪಕರಾಗಿ, 1988ರಿಂದ 95ರವರೆಗೆ ಮಣಿಪುರದ ಇಂಪಾಲ್ ವಿವಿಯಲ್ಲಿ ಭಾಷಾ ಪ್ರಾಧ್ಯಾಪಕರಾಗಿ ಹಾಗು ಮೈಸೂರಿನ ಸಿಐಎಲ್ ನಲ್ಲಿ ಯುಜಿಸಿ ವತಿಯಿಂದ ನಿಯೋಜಿತ 'ಪ್ರಖ್ಯಾತ ವಿಜ್ಙಾನಿ'ಯಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ಸ್ಟಾನ್ ಫರ್ಡ್ ವಿವಿಯಲ್ಲಿ ಭಾಷಾಶಾಸ್ತ್ರಗಳ ಕುರಿತಂತೆ ಯೋಜನೆಗಳ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಬೆಲ್ಜಿಯಂನ ಆಂಟ್ ವರ್ಪ್ ವಿವಿಯಲ್ಲಿ ಹಾಗು ಆಸ್ಟ್ರೇಲಿಯದ ಮೆಲ್ಬೊರ್ನ್ ನಗರದ LAW BROBE ವಿವಿಯಲ್ಲಿ ಅತಿಥಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2002ರಲ್ಲಿ ಜರ್ಮನಿಯ ಲೀಪ್ಝಿನ್ ನಗರದ MAXPLANC INSTITUTEನಲ್ಲಿ ಅತಿಥಿ ವಿಜ್ಙಾನಿಯಾಗಿ ಸೇವೆಸಲ್ಲಿಸಿದ್ದಾರೆ.
ಇಷ್ಟೆಲ್ಲ ಅವಕಾಶಗಳ ಮಧ್ಯೆಯೂ ತೀರಾ ಹಿಂದುಳಿದ ಅಳಿವಿನಂಚಿನಲ್ಲಿರುವ ಕೊರಗ ಬುಡಕಟ್ಟು ಭಾಷೆಯ ಕುರಿತಾಗಿಯೂ ಅಭ್ಯಸಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಪ್ರಸ್ತುತ ಅವರು ನಿರ್ವತ್ತಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪರವಾಗಿ ಅವರಿಗೊಂದು ಅಭಿನಂದನೆಗಳು.
(ಅವರು ಸಂಗ್ರಹಿಸಿದ - ಕೊರಗ ಭಾಷೆಯಲ್ಲಿರುವ ಒಂದು ಆಡು ಮಾತಿನ ಕತೆಯನ್ನು ಇಲ್ಲಿ, ನಿಮಗಾಗಿ ದಾಖಲಿಸಿದ್ದೇವೆ.)
- ಹೃದಯ

Monday 31 March 2014

ಕಾಸರಗೋಡಿನಲ್ಲಿ 'ಕನ್ನಡ'ದ ಸಾಧಕಿ!

ಮಲಯಾಳ ಭಾಷೆಯ ತೀವ್ರ ಪ್ರಭಾವಕ್ಕೆ ಭಾಗಶಃ ಒಳಗಾಗಿರುವ, ಕರ್ನಾಟಕದ ಗಡಿನಾಡು ಕಾಸರಗೋಡುನಲ್ಲಿ ಕೊರಗ ಸಮುದಾಯದ ಯುವತಿಯೊಬ್ಬಳು ಕನ್ನಡದಲ್ಲಿಯೇ ಸ್ನಾತ್ತಕೋತ್ತರ ಪದವಿ ಪೂರೈಸಿ ಸಮುದಾಯಕ್ಕೆ ಕೀರ್ತಿ ತಂದಿದ್ದಾಳೆ.

ವರ್ಕಾಡಿ ಗ್ರಾಮ ಪಂಚಾಯತಿನ ಬೊಡ್ಡೋಡಿಯ ಕೂಲಿಕಾರ್ಮಿಕ ವೃತ್ತಿಯ ಶೇಖರ ಕೊರಗ ಮತ್ತು ತುಕ್ರು ಎಂಬವರ ಮಗಳಾಗಿರುವ ಮೀನಾಕ್ಷಿ ಕೊರಗ ಎಂಬವಳೇ ಈ ಸಾಧನೆಗೈದವಳು.

ಬೊಡ್ಡೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಈಕೆ ಹತ್ತಿರದ ಕೊಡ್ಲುಮೊಗರು ವಾಣಿವಿಜಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದರು. ಕನ್ಯಾನ ಕಾಲೇಜಿನಲ್ಲಿ ಪಿಯುಸಿ ಪಾಸಾದ ಮೀನಾಕ್ಷಿ, ಮಂಜೇಶ್ವರ ಗೋವಿಂದ ಪೈ ಸರಕಾರಿ ಸ್ಮಾರಕ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. 2012ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ ಪೂರೈಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಆದಿವಾಸ ಕೊರಗ ಸಮುದಾಯದ ಸ್ನಾತ್ತಕೋತ್ತರ ಪದವಿ ಪೂರೈಸಿದ ಪ್ರಪ್ರಥಮ ಸಾಧಕಿಯಾಗಿ ಮೂಡಿ ಬಂದಿದ್ದಾರೆ.

ಇದೀಗ ಮೀಯಪದವಿನ ರತ್ನಾಕರ ಕೊರಗ ಎಂಬವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಅಭಿನಂದನೆಗಳು ಮೀನಾಕ್ಷಿ ಬೊಡ್ಡೋಡಿಯರೆ...
- ಹೃದಯ

Friday 21 March 2014

ಕೊರಗರ ಶ್ರೀಮಂತಿಕೆ!

ವೈವಾಹಿಕ ಸಂಬಂಧಗಳು ಬಂದಾಗ, ಯಾವುದೇ ಮುಂದುವರಿಯುತ್ತಿರುವ ಅಥವಾ ಮುಂದುವರಿದಿರುವ ಜನಾಂಗಗಳು - 'ವರದಕ್ಷಿಣೆ'ಯ (ಬದಿ) ವಿಚಾರವನ್ನು ತಮ್ಮ ಹಮ್ಮು ಬಿಮ್ಮಗೆ ಸರಿಯಾಗಿಯೇ ಪ್ರತಿಪಾದಿಸುತ್ತದೆ, ಅದನ್ನು ತಮ್ಮ ಗತ್ತು ಗೈರತ್ತಿನ ಸಂಕೇತವಾಗಿ ತೋರ್ಪಡಿಸುತ್ತದೆ. ಆದರೆ, ಸಂಬಂಧದಲ್ಲಿ ಅತೀ ಶ್ರೀಮಂತಿಕೆಯನ್ನೇ ಮೇಲೈಸಿಕೊಂಡಿರುವ, ಸಾಮಾಜಿಕವಾಗಿ ಅತೀ ಹಿಂದುಳಿದಿರುವ - ಈ ಕೊರಗ ಸಮುದಾಯ ವೈವಾಹಿಕ ವಿಚಾರದಲ್ಲಿಯೂ, 'ಬದಿ'ಯನ್ನು ಬದಿಗಿರಿಸಿ ತನ್ನ ಹಿರಿಮೆಯನ್ನು ಇತರ ಶ್ರೀಮಂತ ಸಮುದಾಯ ನಾಚುವಂತೆ ಮೆರೆಯುತ್ತಿದೆ. (ಕೊರಗ ಸಮುದಾಯದಲ್ಲಿ ವರದಕ್ಷಿಣೆಯ ಪ್ರಸ್ತಾಪವೇ ಬರುವುದಿಲ್ಲ!) ಆಶ್ಚರ್ಯವಾದರೂ ನಿಜ!


- ಹೃದಯ

Monday 17 March 2014

ಕೊರಗರ ಕುಣಿತ ಮತ್ತು ಕೊರಗರೇತರರ ಕುಣಿತ!!


ಪ್ರತೀ ಬುಡಕಟ್ಟು ಪಂಗಡಗಳೂ ತಮ್ಮದೇ ಆದ ವೇಷಭೂಷಣ, ಭಾಷೆ, ಆಚಾರ ವಿಚಾರ, ಸಂಪ್ರದಾಯ ಮತ್ತು ಕುಣಿತಗಳಿಂದ ತಮ್ಮ ಅಸ್ಥಿತ್ವವನ್ನು ದಾಖಲಿಸಿಕೊಂಡು - ಉಳಿಸಿಕೊಂಡು ಬಂದಿದೆ. ತಮ್ಮ ಸಂಪ್ರದಾಯ ಬದ್ಧ ಕುಣಿತ ಮತ್ತು ಹಾಡುಗಳು ಇತರರಿಗೂ ಮಾದರಿಯಾಗುವಂತೆ ಅದನ್ನು ಪ್ರಸ್ತುತಪಡಿಸುತ್ತಿದೆ. ಈ ಕೊರಗ ಸಮುದಾಯವೂ ತಮ್ಮ ಪ್ರಾಚೀನ ಡೋಲಿನ ಟಕ್ಕು (ಹೊಡೆತ)ಗಳೊಂದಿಗೆ ತಮ್ಮ ಮೂಲದ ನೃತ್ಯ ಪ್ರಕಾರವನ್ನು ಸಮಾಜದ ಮುಂದೆ ಆಕರ್ಷನೀಯವಾಗಿ ಪ್ರದರ್ಶಿಸುತ್ತಿದೆ. ಹಲವಾರು ಕಲಾತಂಡಗಳು ಇದೀಗ ಅಸ್ಥಿತ್ವದಲ್ಲಿದ್ದು - ಹಲವಾರು ಕಡೆ ನೃತ್ಯ ಪ್ರದರ್ಶನಗಳನ್ನು ನೀಡಿದೆ. ಇದೊಂದು ಒಳ್ಳೆಯ ವಿಚಾರವೇ. ಆದರೆ, ಅದ್ಯಾವುದೂ ಆಧುನೀಕರಣಗೊಂಡಿಲ್ಲ. ಏಕೆಂದರೆ ಅದು ರಕ್ತದಲ್ಲಿ ಕರಗತಗೊಂಡಿದೆ.
ಆದರೆ, 'ಕೊರಗ ಕುಣಿತ' ಎಂದು ಪ್ರದರ್ಶಿಸುವ ಕೊರಗರೇತರರು ( ಕೊರಗರಲ್ಲದವರು) ಕುಣಿವ ನೃತ್ಯವಿದೆಯಲ್ಲಾ... ಅದೆಷ್ಟು ಆಧುನೀಕರಣಗೊಂಡಿದೆ ಎಂಬುದಕ್ಕಾಗಿ ಒಂದು ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಕಾಲೇಜೊಂದರ ವಿದ್ಯಾರ್ಥಿಗಳು 'ಕೊರಗ ಕುಣಿತ' ಅನ್ನೋ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದ್ದರು. ಈ ಕುಣಿತಗಾರರು ಮೈಗೆಲ್ಲಾ ಕಪ್ಪು ಬಣ್ಣ ಬಳಿದುಕೊಂಡು, ತಲೆಗೊಂದು ಅಡಿಕೆ ಹಾಲೆಯ ಶಿರಸ್ತ್ರಾಣವನ್ನು ಧರಿಸಿ (ತುಳುವಿನಲ್ಲಿ- ಮುಠ್ಠಾಲೆ ಎನ್ನುತ್ತಾರೆ) ಅಬ್ಬರದ ನಾಸಿಕ್ ಬ್ಯಾಂಡ್ ಗೆ ಕುಣಿಯುವುದು! ಕಳೆದ ಮೈಸೂರು ದಸರಾ ಮೆರವಣಿಗೆಯಲ್ಲಿಯೂ 'ಕೊರಗ ಕುಣಿತ' ಅನ್ನೋ ಇಂಥದ್ದೇ ನೃತ್ಯವನ್ನು ಪ್ರದರ್ಶಿಸಲಾಗಿತ್ತು. ಅಲ್ಲಿಯೂ ಮೈಗೆಲ್ಲಾ ಕಪ್ಪು ಬಣ್ಣ ಬಳಿದು, ತಲೆಗೊಂದು ಮುಠ್ಠಾಲೆ ಧರಿಸಿ ನಾಸಿಕ್ ಬ್ಯಾಂಡ್ ಗೆ ಶಿವಮೊಗ್ಗದ ಜಿಲ್ಲೆಯ ತೀರ್ಥಹಳ್ಳಿಯ ತೆಂಕ್ ಬೈಲ್ - ನವರಸ ಕಲಾತಂಡದ ಸದಸ್ಯರು ಕುಣಿಯುತ್ತಿದ್ದರು. (ಆ ಚಿತ್ರವನ್ನು ನಾವು - 'ಕೊರಗೆರ್ನ ಅಳಿಪು ಒರಿಪು'ವಿನಲ್ಲಿ ಪ್ರಕಟಿಸಿದ್ದೆವು.) ಆದರೆ, ಇಲ್ಲಿರುವ ಚಿತ್ರವನ್ನೊಮ್ಮೆ ಸರಿಯಾಗಿ ನೋಡಿ... ಸಿನೇಮಾ ಹಾಡೊಂದಕ್ಕೆ ಮಾಡುವ ಟಪ್ಪಾಂಗುಚ್ಚಿ ಶೈಲಿಯಂತಿದೆ! ಎಡಗಡೆಯಲ್ಲಿ ನಾಸಿಕ್ ಬ್ಯಾಂಡ್ ಹೊಡೆಯುತ್ತಿದ್ದರೆ, ಬಲಗಡೆಯಲ್ಲಿ ಸೌಂಡ್ ಬಾಕ್ಸ್ ಇಡಲಾಗಿದೆ. ಇದನ್ನು 'ಕೊರಗ ಕುಣಿತ' ಎಂದು ನವಂಬರ್ 2, 2012ರಂದು Flickrನಲ್ಲಿ ದಾಖಲಿಸಲಾಗಿದೆ. ಇಲ್ಲಿರುವ 'ಆಧುನೀಕರಣದ' ವಿಷಯವೆಂದರೆ - ನಾಸಿಕ್ ಬ್ಯಾಂಡ್ ಅನ್ನೋ 'ಡಬ್ಬ'ದ ಅಬ್ಬರ! ಮತ್ತು ಅದಕ್ಕವರು ಕುಣಿವ ಶೈಲಿ!! ಇದನ್ನು ಆ 'ಆಧುನಿಕರು' - ಕೊರಗ ಕುಣಿತ ಎನ್ನುವುದು.. ಎಂದು ಕರೆಯುವುದು!!

ಇಲ್ಲಿ ನನಗಿರುವ ಜಿಜ್ಙಾಸೆ ಏನೆಂದ್ರೆ... ಕೊರಗ ಕುಣಿತ ಎನ್ನುವ ಇವರು, ಕೊರಗರ ಮರದ ಡೋಲು ಏಕೆ ಬಳಸಲ್ಲ? ಕೊರಗರು ಬಳಸುವ ಕೊಳಲನ್ನು ಏಕೆ ಉಪಯೋಗಿಸಲ್ಲ? ಅದಿರಲಿ, ಕೊರಗರ ಸಂಪ್ರದಾಯಕ ಶೈಲಿಯಲ್ಲಿಯೇ ಏಕೆ ಬ್ಯಾಂಡ್ ಬಡಿಯೊಲ್ಲ?! ಕೊರಗರ ಸಂಪ್ರದಾಯಕ ಶೈಲಿಯಲ್ಲಿಯೇ ಕುಣಿಯಬಾರದು ಯಾಕೆ? ಮೈಗೆಲ್ಲಾ ಕಪ್ಪು ಬಣ್ಣ ಬಳಿದು, ತಲೆ ಮೇಲೊಂದು ಮುಠ್ಠಾಲೆ ಇಟ್ಟು, ಆಧುನಿಕ ಶೈಲಿಯಲ್ಲಿ ಕುಣಿದ ತಕ್ಷಣ - ಅದು 'ಕೊರಗ ಕುಣಿತ' ಅಥವಾ 'ಕೊರಗರದ್ದೇ ಕುಣಿತ' ಹೇಗಾಗುತ್ತದೆ?! ಇದನ್ನು 'ವಿಕೃತ(ರ) ಕುಣಿತ' ಎನ್ನಬಾರದೇ?!



- ಹೃದಯ

Saturday 8 March 2014

ಕೊರಗನೊಬ್ಬನ ಆಕ್ರೋಶಿತ ನುಡಿ...

ಅಂದು ಪಂಚಾಯತಿನಲ್ಲಿ ಶೌಚಾಲಯಕ್ಕೆ ಸಂಬಂಧಿಸಿದ್ದ ಒಂದು ಸಭೆ ನಡೆಯುತ್ತಿತ್ತು. ಆಗ ಹಠತ್ತಾಗಿ ಕೊರಗರ ಹುಡುಗನೊಬ್ಬ ಒಳ ಬಂದು - 'ನಮಗೆ ಮಳೆಗಾಲದ ಒಳಗೆ ಮನೆ ಕಟ್ಟಿಸಿ ಕೊಡುತ್ತಿರೋ, ಇಲ್ಲವೋ? ಇಲ್ಲವಾದರೆ ಪಂಚಾಯಿತಿಯ ಅಂಗಳದಲ್ಲೇ ಬಿಡಾರ ಹೂಡುತ್ತೇವೆ..' ಎಂದನಾತ. ಎಲ್ಲರೂ ಒಮ್ಮೆಲೇ ಅವಕ್ಕಾದರು! ಕೊರಗರು ಹೆಚ್ಚಾಗಿ ಕಾಡಿನಲ್ಲೇ ಇದ್ದವರು, ಎಲ್ಲರಿಗೂ ತಗ್ಗಿ ಬಗ್ಗಿ ನಡೆಯುವುದು ಅವರ ಅಭ್ಯಾಸ. ಹೀಗಿರುವಾಗ ಒಬ್ಬ ಕೊರಗರ ಹುಡುಗ ಧೈರ್ಯವಾಗಿ ತನ್ನ ಹಕ್ಕನ್ನು ಕೇಳುವುದು, ಪ್ರತಿಭಟಿನೆಗೆ ಮನಸ್ಸಾದರೂ ಮಾಡುವುದು, ಅದಕ್ಕಾಗಿ ಗ್ರಾಮ ಪಂಚಾಯತಿಯನ್ನೇ ಆರಿಸಿಕೊಳ್ಳುವುದು, ವಿಕೇಂದ್ರಿಕರಣದ ಶಕ್ತಿಯಲ್ಲದೆ ಇನ್ನೇನು?!
(ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತಿನಲ್ಲಿ ನಡೆದ ಘಟನೆ)


-
ನಿಖಿಲ್ ಕೋಲ್ಪೆ (ಪತ್ರಕರ್ತರು),
ಜನಜಾಗೃತಿ ಸಮಿತಿ ನರಿಕೊಂಬು

Tuesday 18 February 2014

ಮೆರವಣಿಗೆಗಳಲ್ಲಿ ಕೊರಗರ ಡೋಲು ಮುಂದೆ (?!) ಯಾಕೆ?


ಹಿಂದಿನ ಕಾಲದಲ್ಲಿ ಊರಿನ ಮಾರಿ ಓಡಿಸುವಾಗ, ಕೋಲ - ನೇಮದ ಭಂಡಾರ ಹೋಗುವಾಗ ಅಥವಾ ಇನ್ನಾವುದೇ ಮೆರವಣಿಗೆಯಲ್ಲಿ ಡೊಳ್ಳಿನ ಕೊರಗರು ಮುಂದಿನ ಸಾಲಿನಲ್ಲಿ ಸುಮಾರು ದೂರದಲ್ಲಿ ಹೋಗಬೇಕಿತ್ತು. ಉಳಿದ ವಾದ್ಯದವರು ಮತ್ತು ಗುತ್ತು- ಬರ್ಕೆಯ ಉತ್ತಮರು ತುಂಬಾ ಹಿಂದಿನಿಂದ ನಿಧಾನವಾಗಿ ಗತ್ತು ಗಾಂಭೀರ್ಯತೆಯಿಂದ ಬರುತ್ತಿದ್ದರು!

ಇಲ್ಲಿ ಮಾತ್ರ ಕೊರಗರು ಮುಂದೆ ಯಾಕೆ..?!
ಶೋಷಣೆಯ ಕಟ್ಟಕಡೆಗೆ ತಳ್ಳಲ್ಪಟ್ಟ ಈ ಕೊರಗ ಸಮುದಾಯ ಆ ಒಂದು ವಿಚಾರದಲ್ಲಿ ಭಾರೀ ಮರ್ಯಾದೆ ಪಡೆಯುತ್ತಿತ್ತೆಂದು ತಿಳಿಯಬೇಡಿ!
ಕಾರಣವಿಷ್ಠೇ, ಅಂದಿನ ಕಾಲದಲ್ಲಿ ಕಾಲು ದಾರಿಗಳು ಬಹಳ ದುರ್ಗಮವಾಗಿತ್ತು. ದಟ್ಟ ಕಾಡಿತ್ತು! ಹಳ್ಳ ಕೊಳ್ಳದ ಮಧ್ಯೆ ಹಾದು ಹೋಗಬೇಕಾದರೆ ಆಳ ಅರಿವು ಗೊತ್ತಿರಲ್ಲಿಲ್ಲ. ಒಟ್ಟಾರೆಯಾಗಿ ದುರ್ಗಮ ದಾರಿ ಬಹಳ ಅಪಾಯಕಾರಿಯಾಗಿತ್ತು. ಕಾಡಿನ ಕ್ರೂರ ಮೃಗಗಳು ಹಸಿವೆಗಾಗಿ ಮನುಷ್ಯರ ಮೇಲೆ ದಾಳಿಯಿಟ್ಟರೆ, ಅದು ಕೊರಗರನ್ನು ತಿನ್ನಲಿ. ಏನಾದರೂ ಅನಾಹುತವಾದರೆ - ಅದು ಕೊರಗರಿಗೇ ಆಗಲಿ, ನಮಗೆ ಏನೂ ಆಗಬಾರದು ಎನ್ನುವ ದುರಾಲೋಚನೆ ಮತ್ತು ದೂರಾಲೋಚನೆ ಅಂದಿನ ಉತ್ತಮರಿಗಿತ್ತು!!
- ಹೃದಯ
 — with Apoorva Rao.

Saturday 15 February 2014

ಕೊರಗ ತನಿಯನ ಕೋಲಿನ ಮಹತ್ವ...

‘ಕೋಲು ಹಿಡಿದವರೆಲ್ಲಾ ಅಜ್ಜರಲ್ಲ!’ ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ... ಕೊರಗ ಜನಾಂಗದ ಕುಲ ಪುರುಷ - ತನಿಯನ ಕಾಲ ನಂತರ (ಬ್ರಾಹ್ಮಣರಿಂದ ನಡೆದ ವ್ಯವಸ್ಥಾ ಬದ್ಧವಾದ ಕೊಲೆ), ಆತನನ್ನು ಕೊರಗ ಸಮುದಾಯದ ಹಿರಿಯರು- ದೈವತ್ವಕ್ಕೇರಿಸಿ ಕುಲಪುರುಷನೆಂದು ಆರಾಧಿಸಲಾರಂಭಿಸಿದರು. ಮರದಡಿಯಲ್ಲಿ ಕಲ್ಲನಿಟ್ಟು ಪೂಜಿಸಲಾರಂಭಿಸಿದರು. ಕಲ್ಲಿನ ಮೇಲೆ ತನಿಯನಿಗೆ ಪ್ರಿಯವಾದ ಶೇಂಧಿಯನ್ನು ಇಡಲಾರಂಭಿಸಿದರು. ಅಲ್ಲೊಂದು ಕೋಲು ಇಟ್ಟರು. ಯಾಕೆಂದರೆ, ಕೊರಗ ಸಮುದಾಯದ ತನಿಯನಿಗೆ ‘ಆಮೆ - ಬೇಟೆ’ಯಾಡುವ ಹವ್ಯಾಸವಿತ್ತು. ಆತ ಹೋದಲೆಲ್ಲಾ ಕೋಲು ಹಿಡಿದುಕೊಂಡು ಹೋಗುತ್ತಿದ್ದ. ಆಮೆ ಹುಡುಕಬೇಕಾದರೆ ‘ಕೋಲು’ ಬೇಕೇ ಬೇಕು. ಕೋಲು ಇಲ್ಲದಿದ್ದರೆ ಆಮೆ ಬೇಟೆಯಾಡಲು ಸಾಧ್ಯವಿಲ್ಲ. ಹಾಗಾಗಿ, ತನಿಯನನ್ನು ಪ್ರತಿಸ್ಟಾಪಿಸಿದಲೆಲ್ಲಾ ಕೋಲು ಇಡುತ್ತಿದ್ದರು - ಕೊರಗ ಸಮುದಾಯದ ಬಾಂಧವರು. ಆದರೆ, ಯಾವಾಗ ಇತರ ಸಮುದಾಯದವರು ಕೊರಗರ ‘ತನಿಯ’ನನ್ನು ಪೂಜಿಸಲು ಆರಂಭಿಸಿದರೋ, ಅವರಿಗೆ ಕೋಲಿನ ಮಹತ್ವ ತಿಳಿಯಲಿಲ್ಲ. ಯಾಕೆಂದರೆ, ಕರಾವಳಿಯಲ್ಲಿ ಕೊರಗರನ್ನು ಬಿಟ್ಟರೆ ಬೇರೆ ಯಾರೂ - ಆಮೆ ಬೇಟೆಯಾಡಿದವರಲ್ಲ. ಅವರೂ ತನಿಯನ ಕಲ್ಲಿನಲ್ಲಿ ಕೋಲನ್ನು ಇಟ್ಟು ‘ತನಿಯಜ್ಜ’ ಎಂದು ಬಿಟ್ಟರು, ಇತರರೂ ‘ಕೊರಗಜ್ಜ’ ಎಂದರು! ಆದರೆ ತನಿಯ ಕಾಲವಾದದ್ದು ತನ್ನ ಬರಿಯ ಹದಿನೆಂಟನೆ ವಯಸ್ಸಿನಲ್ಲಿ! ಆತನಿಗೆ ಕೋಲು ಬೇಕಾದದ್ದು ಆಮೆ ಬೇಟೆಯಾಡಲೇ ಹೊರತು ಆಧಾರಕ್ಕಲ್ಲ! ಆತ ಅಜ್ಜನಾಗಲೇ ಇಲ್ಲ. ಆದರೆ, ಇತರರು ಆತನನ್ನು ‘ಅಜ್ಜ’ನನ್ನಾಗಿ ಮಾಡಿಬಿಟ್ಟರು!
(ಇದೀಗ ಕೋಲಿನ ಬದಲು 'ಬೆಳ್ಳಿ ದಂಡು' ಇಟ್ಟು ಪೂಜಿಸುತ್ತಿದ್ದಾರೆ!)
- ಹೃದಯ



ಚಿತ್ರ : ಸಾಯಿರಾಜ್ ಜ್ಯೋತಿ


Friday 7 February 2014

ಬದುಕೆಂಬ ರಥದ ಸ್ವ-ಸಾರಥಿಗಳು...

ಕೊರಗರು ಮೂಲತಃ ಸ್ವಉದ್ಯೋಗಿಗಳು! ಕಾಡಿನಲ್ಲಿ ಹೇರಳವಾಗಿ ದೊರಕುತ್ತಿದ್ದ ಬಿದಿರು - ಬಿಳಲುಗಳಿಂದ, ಬುಟ್ಟಿ ಮತ್ತಿತ್ತರ ಪರಿಕರಗಳನ್ನು ಮಾಡಿ, ಇತರರಿಗೆ ಮಾರಿ ಜೀವನ ಸಾಗಿಸುತ್ತದ್ದವರು. ಜೇನು ಮತ್ತು ವನಸ್ಪತಿಗಳು -ಆಹಾರದ ಮತ್ತು ಸ್ವಉದ್ಯೋಗದ ಮೂಲಗಳಾಗಿದ್ದವು. ಕಾಡಿನೊಳಗಿನ ಸ್ವಚ್ಛಂದ ಬದುಕು - ಜೀವನದ ಪಾಠವನ್ನು ಮತ್ತು ಸ್ವಉದ್ಯೋಗದ ನೆಲೆಯನ್ನು ಒದಗಿಸಿತ್ತು. ಕಾಡೆಂದರೆ ಬದುಕು, ಕಾಡೆಂದರೆ ನಾವು ಮತ್ತು ನಾವು ಕಾಡಿನ ಮಕ್ಕಳು ಎನ್ನುವುದೇ ಜೀವನದ ಸಿದ್ದಾಂತವಾಗಿತ್ತು.

ಕಾಲಚಕ್ರದ ಬದುಕಿನಲ್ಲಿ, ಬದಲಾವಣೆಯೆಂಬ ಗತಿಚಕ್ರವು ತಮಗರಿವಿಲ್ಲದಂತೆ ಪಥವನ್ನು ಬದಲಿಸಿದಾಗ, ಕೊರಗರು ಅನುಭೋಗದ ವಸ್ತುವಾಗಿಬಿಟ್ಟರು. ಅಜಲು ಪದ್ಧತಿಯೆಂಬ ದಾಸ್ಯದ ವ್ಯವಸ್ಥೆಯ ಸ್ಥಿತಿಗತಿಯೊಂದು ಕೊರಗರ ಸ್ವವಲಂಬನೆಯ ಬದುಕಿನ ಮೂಲ ಸೆಲೆಯನ್ನು ಕಸಿದುಬಿಟ್ಟತು. ಕೊರಗರು ಊರವರ ಚಾಕರಿಯನ್ನು ಕಡ್ಡಾಯವಾಗಿ ಮಾಡಬೇಕಾಯಿತು. ತಮ್ಮ ಸ್ವಉದ್ಯೋಗದ ಪರಿಕರಗಳಾದ ಬುಟ್ಟಿ ಮತ್ತಿತರ ವಸ್ತುಗಳನ್ನು, ಊರ ದನಿಗಳಿಗೆ ಉಚಿತವಾಗಿ ನೀಡಲೇಬೇಕಿತ್ತು. ಏಕೆಂದರೆ, ಅದು ಸೇವೆಯ ರೂಪದ ಊಳಿಗಮಾನ್ಯ ಎಂಬ ಕ್ರೂರ ವ್ಯವಸ್ಥೆಯಾಗಿತ್ತು. ಉಚಿತವಾಗಿ ಬುಟ್ಟಿ ಮತ್ತು ಕಾಡುಡ್ಪತ್ತಿಗಳನ್ನು ಕೊಡಬೇಕಾಗಿ ಬಂದಾಗ, ಹೊಟ್ಟೆಯ ಹಸಿವನ್ನು ನೀಗಿಸಲು - ಎಂಜಲನ್ನ ತಿನ್ನಬೇಕಾಗಿ ಬಂತು. ಕೊರಗರ ಸ್ವಉದ್ಯೋಗ ಕಣ್ಮರೆಯಾಗುತ್ತಾ, ದಾಸ್ಯದ ಬೇಗುದಿಯಲ್ಲಿ ಸಿಲುಕಬೇಕಾಯಿತು.

ಬದುಕು ನಿಂತ ನೀರಲ್ಲ! ಬದಲಾವಣೆಗಳಿಂದ ಕೂಡಿದ ಹರಿವ ನೀರಿನಂತೆ, ಸದಾ ತನ್ನ ಚಲನವಲನಗಳನ್ನು ಬದಲಿಸುತ್ತಾ, ವಿಸ್ತರಿಸುತ್ತಿರುತ್ತದೆ. ಕೊರಗರ 'ಬದಲಾವಣೆಯ ಹಿನ್ನಲೆ'ಯ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸುವುದಾದರೆ..., ಪರಿವರ್ತನೆಯ ತಂಗಾಳಿ ಹಿತಾನುಭವದಂತೆ ಮೂಡತೊಡಗಿತು. ಸಂಘಟನೆ, ಶಿಕ್ಷಣ ಮತ್ತು ಕಲಿತುಕೊಂಡ ಬದುಕಿನ ಪಾಠ - ಹಲವಾರು ಬದಲಾವಣೆಯ ಬಿರುಗಾಳಿಯನ್ನೇ ಎಬ್ಬಿಸಿತು. ಕೊರಗ ಬಂಧುಗಳು ಸಂಘಟನೆಯಿಂದಾಗಿ, ಸದಾ ಸಮುದಾಯದ ಹಿತಚಿಂತನೆಯನ್ನೇ ಮಾಡಲಾರಂಭಿಸಿದರು. ಸರಕಾರದೊಂದಿಗೆ ತಮ್ಮ ಹಕ್ಕುಗಳಿಗಾಗಿ ಮತ್ತು ಸ್ವಚ್ಛಂದ ಬದುಕಿಗಾಗಿ ಸೌಮ್ಯಸಂಘರ್ಷಕ್ಕಿಳಿದರು. 'ಅವಮಾನವೀಯ ಅಜಲು' ನಿಷೇದದಿಂದಗಿ ನಿಜವಾದ 'ಬದುಕಿನ ಸ್ವತಂತ್ರ್ಯ'ದ ಸವಿಯನ್ನು ಪಡೆದರು. ಆಶಾಜೀವಿಗಳಾಗಿ ಮತ್ತೆ ಸ್ವಉದ್ಯೋಗದ ಕನಸನ್ನು ಕಾಣಲಾರಂಭಿಸಿದರು.

ಕನಸು ಜೀವನದ ಪಥವನ್ನೇ ಬದಲಿಸುತ್ತದಂತೆ! ಹಿತಚಿಂತಕರ ಮಾತು, ಕೊರಗರ ಬದುಕಿನಲ್ಲಿಯೂ ಹಲವಾರು ಸ್ವಉದ್ಯೋಗಿ ಆಕಾಂಕ್ಷಿಗಳನ್ನು ಸೃಷ್ಠಿಸಿತು. ಕೊರಗರು ಪರರ ಸೇವೆ ಮಾಡುವವರಲ್ಲ, ಕೊರಗರೆಂದರೆ ಕೈಲಾಗದವರಲ್ಲ ಎಂಬುದನ್ನು ಸಾಧಿಸಲು ಮುಂದಾದರು. ಆ ಸಾಹಸಿಗರ ಸಾಲಿನಲ್ಲಿಂದು - ೨೦೦ಕ್ಕೂ ಹೆಚ್ಚು ರಿಕ್ಷಾ ಚಾಲಕರು ಮತ್ತು ಮಾಲಕರಿದ್ದಾರೆ. ಸ್ವಂತ ಲಾರಿ ಮತ್ತು ಕಾರುಗಳನ್ನು ಓಡಿಸುವವರಿದ್ದಾರೆ. ಟೈಲರ್ ಗಳಿದ್ದಾರೆ, ಡೋಬಿ ಅಂಗಡಿ ಮಾಲಕರಿದ್ದಾರೆ, ಮಲ್ಲಿಗೆ ಕೃಷಿಕರಿದ್ದಾರೆ, ಎಕರೆಗಟ್ಟಲೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಮಾಡಿ 'ಪ್ರಗತಿಪರ ಕೃಷಿಕ' ಎಂದು ಬಿರುದನ್ನು ಪಡೆದವರೂ ಇದ್ದಾರೆ. ಅವರೆಲ್ಲರೂ - ತಾವು ಕೊರಗರು, 'ಕೊರಗುವುದು ನಮ್ಮ ಬದುಕಲ್ಲ' ಎನ್ನುವ ಸಂದೇಶವನ್ನು ಧನಿಕ ಮತ್ತು ಶೃಮಿಕ ವರ್ಗಕ್ಕೆ ಸಾರಿದವರು! ಬದುಕೆಂಬ ರಥದ ಸ್ವಸಾರಥಿಗಳಿವರು. ಕನಸು ಮತ್ತು ಕನಸು ನನಸು ಮಾಡುವ ಮನಸು - ಇವೆರಡರ ಫಲವೇ ಇದು! ಕನಸು ಸಾಕಾರಗೊಳಿಸಿದ ಆ ಸಧಕರಿಗಿದೋ ನನ್ನದೊಂದು ಪ್ರೀತಿಪೂರ್ವಕ ಅಕ್ಷರ ನಮನಗಳು...
- ಹೃದಯ

Monday 3 February 2014

ಕೊರಗರ ಕುರಿತು ಹೊರತಂದ ಅಧ್ಯಯನಶೀಲ ಕೃತಿಗಳು...

ಆದಿವಾಸಿ ಬುಡಕಟ್ಟು ಪಂಗಡಕ್ಕೆ ಸೇರಿದ ಕೊರಗ ಜನಾಂಗದ ಕುರಿತು, ಸ್ವಾತಂತ್ರ್ಯಪೂರ್ವದಿಂದಲೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು, ಸಂಶೋಧಕರು ಹಾಗು ಅಧ್ಯಯನಕಾರರು - ಆಳವಾದ ಅಧ್ಯಯನ ಮಾಡಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಆ ಕೃತಿಗಳನ್ನು ಮತ್ತು ಅದರ ಲೇಖಕರ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ

1) KORAGA - Census of India 1971 (a Scheduled tribe in Karnataka)
: Office of the Registrar Generel India, Ministry of Home Affairs New Delhi.

2) La Missione the Mangalore Numero Unico Pro Koragar
: Maggio (1910ರಲ್ಲಿ)

3) Castes and Tribes of India
: Edgur Thurston

4) My Rambles Through the Missions of the Diocese of Mangalore
: Very Rev. R. D. Sequeira

5) Among the Outcasts
: Fr. Emmanuel Banfi S J

6) Tribes of Mysore
: A.A.D Luiz, G S Vishva and Co, Krishna Building, Avenue Road, Bangalore 560002

7) The Tribes and Castes of Madras Presidency
: M. B. Sherring

8 ) India - Reference Annual
: Ministry of Information and Broadcasting, Government of India

9) Year Book
: S.K. Sachdeva, Competition Review Pvt. Ltd, New Delhi

10) The Koraga Language
: D. N. Shankar Bhat, Deccan College, Post Graduate Research Institute, Poona

11) Ashram Schools a Report
: Miss Celine Aranha

12) Koragas A Primitive Tribes of South India
: Lawrence D'Souza S.J, UNESCO Association of Colorado formely Steele Center UNESCO Denver, U S A

13) ಕೊರಗರು
: Amrutha Someswar, IBH Prakashana, Gandhinagara Bangalore - 560009

14) ಕೊರಗ (ಕೆಲವು ಹಾಡುಗಳು)
: Kayyar Kinhanna Rai, Perdala - 670551

15) ಕೊರಗ ಜನಾಂಗ
: Dr. Aravinda Malagathi, Dr. Wodeyar D Heggade, University of Mangalore

16) ಕೊರಗರು ಸಮಕಾಲೀನ ಸ್ಪದಂನೆ
: Dr. Gangadhara Daiwajna Hampi University

1875ರಲ್ಲಿ M. T. Wallhouse ಎಂಬ ಬ್ರಿಟೀಷ್ ಸಂಶೋಧಕ ಹಾಗು 1885 ಉಳ್ಳಾಳ ರಾಘವೇಂದ್ರ ರಾವ್ ಎಂಬವರು ಕೊರಗರ ಜನಸಂಖ್ಯೆ, ಸಂಸ್ಕ್ರತಿ, ಆಚಾರ ವಿಚಾರ ಮತ್ತು ಭಾಷೆಯ ಕುರಿತಾಗಿ ಸಮಗ್ರ ವರದಿ ತಯಾರಿಸಿ ಆಗಿನ ಮದ್ರಾಸ್ ಸರಕಾರಕ್ಕೆ ಸಲ್ಲಿಸಿದ್ದರು. ('Restless for Christ' ಅನ್ನೊ ವರದಿಯೂ ಮದ್ರಾಸ್ ಸರಕಾರಕ್ಕೆ ಸಲ್ಲಿಕೆಯಾಗಿತ್ತು.)
ಅಷ್ಟೇ ಅಲ್ಲದೆ, ನಮ್ಮವರೇ ಆದ - ಬಾಬು ಕೊರಗ ಪಾಂಗಾಲರು, ಅವಮಾನವೀಯ ಅಜಲು ಚಾಕರಿಯ ಸ್ವರೂಪವನನ್ನು ತೆರೆದಿಡುವ - 'ಅಜಲು ಒಂದು ವಿಶ್ಲೇಷನೆ' ಎನ್ನವ ಪುಸ್ತಕವನ್ನು ಹೊರತಂದಿದ್ದಾರೆ.


- ಹೃದಯ

Wednesday 29 January 2014

ಕೊರಗ ಸಮುದಾಯದಲ್ಲಿ ಮಹಿಳಾ ಹಿತರಕ್ಷಣೆ

ಬದಲಾದ ಕಾಲಘಟ್ಟದಲ್ಲಿ, ಕೊರಗ ಮಹಿಳೆ ‘ಹಿಂದಿನ’ವರಿಗಿಂತ - ಈಗ ಹೆಚ್ಚು ಅದೃಷ್ಟಶಾಲಿ ಎನ್ನಬಹುದು. ಹಿಂದಿನಿಂದಲೂ ಕೊರಗ ಮಹಿಳೆಯ ಕುರಿತಾಗಿ, ಸಮಾಜದಲ್ಲಿರುವ - ಗೌರವಯುತವಾದ ಮಾತೃ ಭಾವನೆ ಮತ್ತು ಏಕತೆಯ ಪರಿಕಲ್ಪನೆ ಇತರ ಎಲ್ಲಾ ಆದಿವಾಸಿ (ಗಿರಿಜನ) ಮತ್ತು ಪ್ರಭಾವಶಾಲಿ ಸಮುದಾಯಕ್ಕಿಂತಲೂ ಕೊರಗ ಸಮುದಾಯದವರಲ್ಲಿ ಹೆಚ್ಚು ಪ್ರಗತಿಪರವಾಗಿದೆ. ಆದಿಕಾಲದ ಕೊರಗ ಮಹಿಳೆಯರು ತಮ್ಮ ದೇಹವನ್ನು ಸೊಪ್ಪು ಮತ್ತು ಅಲಂಕೃತ ಮಣಿಸರಗಳಿಂದ ಮುಚ್ಚಿಕೊಳ್ಳುತ್ತಿದ್ದರು. ಈಗ ಎಲ್ಲವೂ ಅನುಕೂಲಕರವಾಗಿ ಮಾರ್ಪಾಟಾಗಿದೆ. ಹಾಗಾಗಿಯೇ ಕೊರಗ ಮಹಿಳೆಯರು ‘ಹಿಂದಿನವರಿಗಿಂತ’ ಹೆಚ್ಚು ಅದೃಷ್ಠಶಾಲಿ ಎಂದಿರುವುದು.

ಕೊರಗ ಸಮುದಾಯವನ್ನು ಹೊರತು ಪದಿಸಿದರೆ ಒಟ್ಟು ಸಮಾಜದಲ್ಲಿ - ಮಹಿಳೆಯರ ಕುರಿತಾಗಿ ‘ತಾರತಮ್ಯ’ ಕಂಡು ಬರುತ್ತದೆ. ಮುಖ್ಯವಾಗಿ- ಹೆಣ್ಣು ಭ್ರೂಣ ಹತ್ಯೆ... ಶ್ರೀಮಂತ ಕುಟುಂಬಗಳು ತಮ್ಮ ಆಸ್ತಿ ಪಾಸ್ತಿ ಪರರ ಪಾಲಾಗಬಹುದೆಂಬ ಭೀತಿಯಲ್ಲಿ ಮತ್ತು ಗಂಡು ಮಗುವಾದರೆ ಆಸ್ತಿ ತಮ್ಮಲ್ಲೇ ಉಳಿಯಬಹುದೆಂಬ ದುರಾಲೋಚನೆಯಿಂದಾಗಿ- ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಾರೆ ಎಂಬುದು ವಾಸ್ತವವಾದರೆ, ಕೊರಗ ಸಮುದಾಯದಲ್ಲಿ ಇಂತಹ ಪ್ರಕರಣಗಳೇ ಕಂಡು ಬಂದಿಲ್ಲ. ಇದು ಕೊರಗರ ಹೃದಯ ಶ್ರಿಮಂತಿಕೆ. ಇದಕ್ಕೆ ಕೊರಗ ಸಮುದಾಯದ ಆಧರಣೀಯ ದೈವ ‘ಅಪ್ಪ- ಬೈಕಾಡ್ತಿ ’(ಕೊರಗ ಸಮುದಾಯದ ಕುಲದೈವ - ಕೊರಗ ತನಿಯನ ತಾಯಿ)ಯ ಭಯ - ಭಕ್ತಿ ಕಾರಣವಾಗಿರಬಹುದು.

ಇಂದಿನ ಔದ್ಯೋಗಿಕ ರಂಗ, ಸಂಘಟನೆ, ಶಿಕ್ಷಣ, ಆಧುನಿಕತೆ, ಸಮಾಜದ ಬದಲಾದ ದೃಷ್ಟಿಕೋನಗಳು ಹೆಚ್ಚು ಪ್ರಗತಿಪರವಾಗಿದೆ. ಒಟ್ಟು ಸಮಾಜ ಕೊರಗ ಸಮುದಾಯದಲ್ಲಿ ಮಹಿಳಾ ಹಿತಚಿಂತನೆಯ ದೃಷ್ಟಿಕೋನವನ್ನು ಅನುಸರಿಸಿದರೆ, ಎಲ್ಲಾ ಸಮುದಾಯದ ಮಹಿಳೆಯರೂ ಸುರಕ್ಷಿತರಾಗಬಹುದು.

- ಸುನೀತಾ ಸೂರ್ಯವಂಶ, ಬೆಳುವಾಯಿ

Friday 24 January 2014

ಜಾನಪದ ಕುಣಿತಗಳಲ್ಲಿ ಕೊರಗರ ಉಪಸ್ಥಿತಿ! ಏನಿದರ ಒಳಮರ್ಮ?



ಜಾನಪದ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಸಂಪ್ರದಾಯ ಬದ್ಧ ಕೊಡುಗೆಗಳನ್ನು ನೀಡುತ್ತಾ ಬಂದಿರುವುದೇ ತಳಮಟ್ಟದ ಸಮುದಾಯಗಳು. ಇವರು ತಮ್ಮ ಪಾಡ್ದಾನ, ಕುಣಿತ ಮತ್ತು ವೇಷಭೂಷಣಗಳಿಂದ ಜನಪದ ಕುಣಿತಗಳ ಸಿರಿವಂತಿಕೆಯನ್ನು ಈಗಲೂ ಉಳಿಸಿಕೊಂಡು ಬ
ಂದಿದ್ದಾರೆ. ಈ ಸಾಂಸ್ಕೃತಿಕ ವೈಭವದ ಹುಟ್ಟಿಗೆ ಕಾರಣವೇ, ಅನಕ್ಷರಸ್ಥತನ. ಇಂಥಹ ಜನಮನ ಸೂರೆಗೊಂಡ ಜಾನಪದ ಸೊಗಡಿನಲ್ಲಿ ಕೊರಗ ಅಸ್ತಿತ್ವ ಹೇಗಿತ್ತು? ಎಂಬುದಕ್ಕೆ ಇಲ್ಲಿದೆ ನಿದರ್ಶನ.

ಬಾಲೆ ಸಾಂತು :
ತುಳುನಾಡಿನ ಮರಾಠಿ ನಾಯ್ಕರ ಆಚರಣಾತ್ಮಕ ಕುಣಿತಗಳಲ್ಲಿ ‘ಬಾಲೆ ಸಾಂತು’ ಕೂಡಾ ಒಂದು. ಬಂಟ್ವಾಳ, ಎಣ್ಮಕಜೆ, ಕೋಡಂದೂರು ಮುಂತಾದ ಪ್ರದೇಶಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತಾದರೂ, ಇತ್ತೀಚೆಗೆ ಇದು ಎಲ್ಲೂ ಕಂಡು ಬಂದಿಲ್ಲ. ಈ ಒಂದು ಆಚರಣೆಯಲ್ಲಿ - ಪ್ರತ್ಯಕ್ಷವಾಗಿಯಲ್ಲದಿದ್ದರೂ, ಕೊರಗ ಜನಾಂಗದ ಉಪಸ್ಥಿತಿ ಇತ್ತು ಎಂದು ಡಾ.ಸ.ಚಿ. ರಮೇಶ್ ರವರ ‘ಕರ್ನಾಟಕದ ಜಾನಪದ ಆಚರಣೆಗಳು’ ಎನ್ನುವ ಪುಸ್ತಕದಿಂದ ತಿಳಿದು ಬರುತ್ತದೆ.
ಬಾಲೆ ಸಾಂತು ಕಲಾ ತಂಡದಲ್ಲಿ ಹನ್ನೊಂದು ಮಂದಿ ವೇಷಧಾರಿಗಳಿರುತ್ತಾರೆ. ಸನ್ಯಾಸಿ, ಅರ್ಚಕ(ಪೂಜೆ ಭಟ್ಟ), ಗುರಿಕಾರ, ಪೂಜಾರಿ( ದೈವ ನರ್ತಕ), ಕೊರಗ ಮತ್ತು ಕೊರಪೊಳು (ಕೊರಗ ಮಹಿಳೆ) ಸಾಹೇಬ ಮತ್ತು ಮಂಗ ಕುಣಿಸುವವ ಇತ್ಯಾದಿ. ಈ ವೇಷಧಾರಿಗಳು ಕಾಸರಕದ ಮರದಡಿ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಶಾರದಾಂಬೆಯನ್ನು ಸ್ಮರಿಸುತ್ತಾರೆ. ನಂತರ ಮನೆ - ಮನೆಗಳಿಗೆ ತೆರಳಿ, ಮರಾಠಿ ಭಾಷೆಯ ಹಾಡು ಹಾಡುತ್ತಾ... ‘ಶೃಂಗೇರಿಚೆ ಶಿಷ್ಯರಮಿ ಬಾಲ್ಚಾಲ್ಯೊ ಬಾಲೆ ಸಾಂತು, ಕಾಟ್ಮರೊ ಜೋಗಿರಮಿ ಬಾಲ್ ಬಾಲ್ಯೊ ಬಾಲೆ ಸಾಂತು’ ಎಂದು ಗುರಿಕಾರ ಹಾಡುತ್ತಿದ್ದಂತೆ - ಇತರ ಕಲಾವಿದರು ‘ಬಾಲ್ ಬಾಲೋ ಬಾಲ್ ಸಾಂತು’ ಎಂದು ಸೊಲ್ಲನ್ನು ಹಾಡುತ್ತಾ ಕುಣಿಯುತ್ತಾರೆ. ಬಾಲೆ ಸಾಂತು ಆಚರಣೆಯಿಂದ ಊರಿನ ಅನಿಷ್ಟ ದೂರವಾಗುತ್ತದೆ ಎಂದು ನಂಬುತ್ತಾರೆ.

ಚೆನ್ನು ಕುಣಿತ :
ಈ ಜನಪದ ನೃತ್ಯ ಪ್ರಕಾರವನ್ನು ‘ಕೋಪಾಲ’ (ನಲಿಕೆ) ಜನಾಂಗದವರು ಆಚರಿಸಿಕೊಂಡು ಬರುತ್ತಾರೆ. ಬೆಳ್ತಂಗಡಿ ಪ್ರಾಂತ್ಯದಲ್ಲಿ ಈ ವೇಷ ಹೆಚ್ಚಾಗಿ ಕಂಡು ಬರುತ್ತದೆ. ಕೋಪಾಲ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ - ‘ಚೆನ್ನು’ ವಿನ ಕುರಿತಾಗಿ ಆರಾಧಿಸಿ ನಲಿವ ನೃತ್ಯ ಪ್ರಕಾರವಿದು. ಈ ಚೆನ್ನು ವೇಷದ ಜೊತೆಯಲ್ಲಿ ಕೊರಗ ವೇಷವೂ ಇರುವುದು ವಿಶೇಷ!

ಕಂಗೀಲು ಕುಣಿತ :
ಇದು ಕರಾವಳಿ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಆರಾಧನಾ ಪದ್ಧತಿಯ ಪೂಜಾ ಕುಣಿತ. ಮಾಯಿ ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ , ಮೂರು ದಿನ ರಾತ್ರಿ ಮತ್ತು ಮೂರು ದಿನ ಹಗಲು - ಗೊಡ್ಡ ಜನಾಂಗದವರಿಂದ ನಡೆಸಿಕೊಂಡು ಬರುವ ವಿಶಿಷ್ಟ ಕುಣಿತ. ಪುರುಷ ಪ್ರಧಾನವಾದ ಈ ಕುಣಿತದಲ್ಲಿ - ಪಾತ್ರಧಾರಿಗಳು ತಮ್ಮ ಉಡುಪು ಮತ್ತು ಶಿರಸ್ತ್ರಾನವಾಗಿ ತೆಂಗಿನ ಸಿರಿಯನ್ನು ಕಟ್ಟಿಕೊಂಡು ಡೋಲು - ಚೆಂಡೆಯ ನಾದಕ್ಕೆ ತಕ್ಕುದಾಗಿ ಕುಣಿಯುತ್ತಾರೆ. ಇದರಲ್ಲಿ ‘ನಾಗಿ’ ಎನ್ನುವ ‘ಕೊರಗ ವೇಷ’ವೂ ಇರುತ್ತದೆ. ಈತನ ಸುತ್ತ ಇತರ ವೇಷಧಾರಿಗಳು ಕುಣಿಯುತ್ತಾರೆ. ಈ (ಕೊರಗ)ವೇಷ ಮನೆಯ ಹಿಂಬಾಗದಲ್ಲಿ ಹೋಗಿ ದಾನ ಪಡೆಯುವುದು ಮತ್ತು ಭಕ್ತಾದಿಗಳಿಗೆ ತನ್ನ ಹಣೆಯಲ್ಲಿನ ಕಪ್ಪು ಮಸಿ (ಕರಿಗಂಧ -- ಕೊರಗ ತನಿಯನ ಆರಾಧಕರು ಹಾಕುವುದು ಕೂಡಾ ಕರಿಗಂಧವನ್ನೇ!) ಯನ್ನು ಭಕ್ತಾಧಿಗಳ ಹಣೆಗೆ ಸೋಕಿಸುವುದು (ಸ್ಪರ್ಶಿಸುವುದಿಲ್ಲ!) ಕಂಗೀಲು ಆರಾಧನಾ ಪದ್ಧತಿಯ ವಿಶೇಷ!

ಇಲ್ಲಿ ಗಂಭೀರವಾದ ಪ್ರಶ್ನೆ ಎಂದರೆ, ಈ ಎಲ್ಲಾ ಜನಪದ ಪ್ರಕಾರಗಳ ಕುಣಿತಗಳಲ್ಲಿ ‘ಕೊರಗ’ರ ಮಧ್ಯಸ್ತಿಕೆ ಹೇಗೆ ಬಂದಿರಬಹುದು? ಏನು ಕಾರಣವಿರಬಹುದು? ಏನಿದರ ಒಳಮರ್ಮ? ಇತರ ತಳಮಟ್ಟದ ಸಮುದಾಯಗಳಿಗೂ, ಆದಿವಾಸಿ ಪಂಗಡದ ‘ಕೊರಗ’ ಜನರಿಗೂ ಏನಾದರೂ ‘ಸಾಂಸ್ಕೃತಿಕ - ಸಂಬಂಧ’ವಿರಬಹುದೇ? ಕೊರಗರ ವೇಷಗಳನ್ನು ಹಾಕುವುದು ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸುವುದು ‘ಅಜಲು ನಿಷೇಧ ಕಾಯಿದೆ’ಯ ಉಲ್ಲಂಘನೆಯಾಗುತ್ತದೆ. ಹೀಗಿರುವಾಗ - ಚೆನ್ನು ಕುಣಿತ, ಬಾಲೆ ಸಾಂತು ಮತ್ತು ಕಂಗೀಲು ನೃತ್ಯಗಳು - ಕಾಯಿದೆಯನ್ನು ಉಲ್ಲಂಘಿಸಿದಂತಾಗುವುದಿಲ್ಲವೇ? ಕೋಲ ನೃತ್ಯಗಳನ್ನು ಸಾರ್ವಜನಿಕ ರಂಗಸ್ಥಳದಲ್ಲಿ ಪ್ರದರ್ಶಿಸುವಂತಿಲ್ಲ. ಆದರೆ - ಇದೇ ರಂಗಕರ್ಮಿಗಳು (ದೈವನರ್ತಕರು) ‘ ಕೊರಗ ವೇಷ’ವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧವಾಗುವುದಿಲ್ಲವೇ? ಕೊರಗ ಅಭಿವೃದ್ಧಿ ಸಂಘಟನೆಗಳು ಮತ್ತು ಜಾನಪದ ವಿಶ್ಲೇಷಕರು ಏನೆನ್ನುತ್ತಾರೆ.


- ಜಿ. ಭವಾನಿ ಶಂಕರ ಕೊರಗ, ಬೆಳುವಾಯಿ
 

Blogger news

Blogroll

About