Pages

Tuesday, 14 January 2014

ಕುಪೋಷಣೆಯೇ ಕೊರಗರನ್ನು ಬಿಟ್ಟು ತೊಲಗು...

'ಕುಪೋಷಣೆ ಎಂದರೆ ಶಾರೀರಿಕ ಮತ್ತು ಮಾನಸಿಕ ದುರ್ಬಲತೆ' ಎನ್ನುತ್ತಾರೆ - ಕುಪೋಷಣೆ ವಿರುದ್ಧ ಜಾಗೃತಿ ಮೂಡಿಸುವ ಜಾಹಿರಾತೊಂದರಲ್ಲಿ ನಟ ಅಮೀರ್ ಖಾನ್.

ಕುಪೋಷಣೆ ಮತ್ತು ಹಸಿವು ರಾಷ್ಟ್ರೀಯ ಸಮಸ್ಯೆಯಾಗಿದೆ. ಸಧೃಡ ಸಮಾಜಕ್ಕೆ ಮಕ್ಕಳೇ ಆಧಾರ. ಎಳೆಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದಿದ್ದರೆ ಮಕ್ಕಳಲ್ಲಿ ಕುಪೋಷಣೆ ಉಂಟಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಪೋಷಕಾಂಶಗಳ ಕೊರತೆಯಿಂದ ಅಂಗಹೀನತೆ ಉಂಟಾಗುತ್ತದೆ.
ಕುಪೋಷಣೆ ಹೊಂದಿರುವ ಮಗು ಕಡಿಮೆ ತೂಕ ಹೊಂದಿರುತ್ತದೆ. ಹಾಗು ಮಗು ಬೆಳೆದಂತೆಲ್ಲಾ ವಯಸ್ಸಿಗೆ ತಕ್ಕ ತೂಕವನ್ನು ಹೊಂದುವುದಿಲ್ಲ. ಮಗುವಿನ ಚಟುವಟಿಕೆಗಳು ಚೈತನ್ಯಪೂರಕವಾಗಿರುವುದಿಲ್ಲ. ತೀವ್ರ ಬಲಹೀನತೆ, ಪಾದ ಮತ್ತು ಮುಖದಲ್ಲಿ ಊತ, ಅತಿಸಾರ ಬೇಧಿ ,ಕೂದಲು ಕಂದು ಬಣ್ಣಕ್ಕೆ ತಿರುಗುವುದು, ಹಸಿವು ಕಡಿಮೆಯಾಗುವುದು, ರಕ್ತಹೀನತೆ, ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು - ಇವು ಕುಪೋಷಣೆಯ ಲಕ್ಷಣಗಳು.
ಬಡತನ, ಮೂಡನಂಬಿಕೆ, ಅನಕ್ಷರತೆ, ಲಿಂಗ ತಾರತಮ್ಯ, ಬಾಲ್ಯ ವಿವಾಹ, ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ, ಸಮರ್ಪಕ ಎದೆಹಾಲು ಉಣಿಸದೇ ಇರುವುದು, ಗರ್ಭಿಣಿಯರಿಗೆ ಪೂರಕ ಆಹಾರ ನೀಡದೆ ಇರುವುದು, ಸ್ವಚ್ಛತೆ ಅನುಸರಿಸದಿರುವುದು ಇವು ಅಪೌಷ್ಟಿಕತೆ ಮತ್ತು ಕುಪೋಷಣೆಗೆ ಕಾರಣವಾಗುತ್ತದೆ.

ಕೊರಗ ಆದಿವಾಸಿಗಳಲ್ಲಿ ಕುಪೋಷಣೆ...


ಕಾಡಿನ ಮಕ್ಕಳಾಗಿ - ಪ್ರಕೃತಿಯ ಆರಾಧಕರಾಗಿ, ತಮ್ಮ ಹಸಿವು, ಉಸಿರು, ಬಾಯಾರಿಕೆ, ನೋವು, ನಲಿವು, ಸಾಮಾಜಿಕ - ಸಾಂಸ್ಕ್ರತಿಕ ಬದುಕನ್ನೆಲ್ಲವನ್ನೂ - ಕಾಡಿನೊಂದಿಗೆ ಬೆಸೆದುಕೊಂಡಿರುವ ಆದಿವಾಸಿಗಳ ಬದುಕು ಖಂಡಿತವಾಗಿಯೂ ಆರೋಗ್ಯಪೂರ್ಣವೇ ಆಗಿತ್ತು. ಎಲ್ಲೂ ಕಲುಷಿತವಾಗದ ನೀರು, ಗಾಳಿ, ಪೌಷ್ಟಿಕಾಂಶದ ಎಲ್ಲಾ ಘಟಕಗಳನ್ನು ತನ್ನಲ್ಲಿ ಮೇಳೈಸಿಕೊಂಡ - ಪ್ರಕೃತಿಯ ಕೊಡುಗೆಗಳಾದ ಗೆಡ್ಡೆ, ಗೆಣಸು, ಸೊಪ್ಪು, ನಾರು, ಬೇರು, ವನಸ್ಪತಿಗಳು, ಪ್ರಾಣಿ - ಪಕ್ಷಿಗಳು ಆದಿವಾಸಿಗಳ ಆಹಾರದ ಮೂಲಗಳಾಗಿದ್ದವು.
ಹಸಿವು ಬಾಯಾರಿಕೆಗಾಗಿ ಕಾಡಿನಲ್ಲಿ ಯತೇಚ್ಛವಾಗಿ ದೊರಕುತ್ತಿದ್ದ ಗೆಡ್ಡೆ ಗೆಣಸು, ಸೊಪ್ಪು, ಉತ್ಕೃಷ್ಟಮಟ್ಟದ ಜೇನು ಇತ್ಯಾದಿಗಳೊಂದಿಗೆ ಸಚ್ಚಂದವಾಗಿ ಬೇಟೆಯಾಡಿ ತಂದ ಪೌಷ್ಟಿಕಾಂಶಯುಕ್ತ ಪ್ರಾಣಿ ಪಕ್ಷಿಗಳ ಮಾಂಸಗಳ ಮೂಲಕ ಆಹಾರ ಸೇವನೆ ಸಾಧ್ಯವಾಗಿದ್ದ ಕಾಲವಿತ್ತು. ಕಾಡು ಮತ್ತು ಕಾಡಿನ ಮೇಲೆ ಸರಕಾರದ ಹಿಡಿತ ಬಿಗಿಯಾದಾಗ ಆದಿವಾಸಿಗಳ ಬದುಕಿನಲ್ಲಿಯೂ ಗಾಢ ಪರಿಣಾಮವನ್ನು ಬೀರಿತು.
ಕಾಡು ಕಡಿದು ನಾಡಾಗಿಸಿದ, ತೋಟವಾಗಿಸಿದ ನಾಗರೀಕತೆ ಎನಿಸಿಕೊಂಡ - ಅಭಿವೃದ್ಧಿ ಹೆಸರಿನ ಭರಾಟೆಯಲ್ಲಿ ಸಿಲುಕಿ ಒದ್ದಾಡುವ ಆದಿವಾಸಿ ಸಮುದಾಯದ ಜನರ ಸ್ಥಿತಿ ಚಿಂತಾಜನಕವಾಯಿತು. ಪ್ರಕೃತಿಯಲ್ಲಿ ಸಂಭವಿಸಿದ ವಿಕೃತಿಯ ಅಭಿವೃದ್ಧಿಯ ಮಧ್ಯೆ ತುತ್ತು ಹೊತ್ತಿನ ಬದುಕಿಗಾಗಿ ವಿಲವಿಲನೆ ಒದ್ದಾಡುವ ಸನ್ನಿವೇಶ ನಿರ್ಮಾಣವಾಯಿತು. ಕಾಲ ಬದಲಾದಂತೆ ಆದಿವಾಸಿಗಳು ಕೂಡಾ ಬದಲಾವಣೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ವಾಲಬೇಕಾಯಿತು. ಸಂಮೃದ್ಧ ಆಹಾರ ವಸ್ತುಗಳಿಗೆ ಕೊರತೆಯುಂಟಾಯಿತು. ನೈಸರ್ಗಿಕವಾಗಿ ದೊರಕುತ್ತಿದ್ದ ಗೆಡ್ಡೆ - ಗೆಣಸುಗಳ ಜಾಗದಲ್ಲಿ ಯಾರೋ, ಹೇಗೋ ಬೆಳೆಸಿದ ತರಕಾರಿಗಳು ಬಂದವು. ಪರಿಶುದ್ಧ ತಂಪು ಪಾನೀಯಗಳ ಬದಲು ನಗರೀಕರಣ, ಕೈಗಾರೀಕರಣ, ಯಾಂತ್ರೀಕರಣ ಮುಂತಾದವುಗಳಿಂದ ಸೃಷ್ಠಿಯಾದ ಉಷ್ಣಗಾಳಿಯನ್ನು ಉಸಿರಾಡುವಂತಾಯಿತು. ಅರಣ್ಯ ಇಲಾಖೆಯ ಕಾನೂನು ಕಟ್ಟಳೆಗಳಿಗೆ ಹೆದರಿ ಬೇಟೆಯಾಡುವುದಕ್ಕೆ ತಿಲಾಂಜಲಿ ಇಡಬೇಕಾಯಿತು. ನಿಧಾನವಾಗಿ ಆದಿವಾಸಿಗಳ ದೇಹದೊಳಗೆ ಕಲುಷಿತ ನೀರು, ಗಾಳಿ, ಆಹಾರ ರೂಪದಲ್ಲಿ ವಿಷ ಪ್ರವೇಶವಾಗಿ ತನ್ನಷ್ಟಕ್ಕೆ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತ ಬಂತು. ಅವಕಾಶವಾದಿ ರೋಗ ರುಜಿನಗಳ ಪ್ರವೇಶಕ್ಕೆ ದಾರಿಯಾಯಿತು. ಕುಪೋಷಣೆಯ ವಂಶಪಾರಂಪರ್ಯಕ್ಕೆ ಎಡೆಯಾಯಿತು. 

ಕುಪೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮತ್ತು ಅಳಿವಿನಂಚಿನಲ್ಲಿರುವ ಸಮುದಾಯದ ಉಳಿವಿನ ಕಡೆಗೆ ಆಲೋಚನೆ ಮಾಡುವವರು, ಮಾಡಬೇಕಾದವರು, ಆಳುವವರು, ನಿರ್ಣಯಿಸುವವರು, ಸಮಾನ ಮನಸ್ಸು - ಸಮಾನ ಆಸಕ್ತಿಯೊಂದಿಗೆ ಧ್ಯೇಯ ಬದ್ಧತೆಗಳಲ್ಲಿ ಕಾರ್ಯನಿರ್ವಹಣೆ ಸಾಧ್ಯವಾದರೆ ಕುಪೋಷಣೆಯನ್ನು ತಡೆಗಟ್ಟಬಹುದು, ನಿಯಂತ್ರಿಸಬಹುದು ಮತ್ತು ಅಳಿವಿನಂಚಿನಲ್ಲಿರುವ ಒಂದು ಸಮುದಾಯವನ್ನು ಉಳಿಸಬಹುದು. 'ಕುಪೋಷಣೆಯೇ ಭಾರತವನ್ನು ಬಿಟ್ಟು ತೊಲಗು...' ಜಾಗೃತಿ ಮನೆ ಮನೆಗಳನ್ನು, ಮನ ಮನಗಳನ್ನು ತಟ್ಟಬೇಕು...
- ಹೃದಯ

0 comments:

Post a Comment

 

Blogger news

Blogroll

About