Pages

Wednesday 29 January 2014

ಕೊರಗ ಸಮುದಾಯದಲ್ಲಿ ಮಹಿಳಾ ಹಿತರಕ್ಷಣೆ

ಬದಲಾದ ಕಾಲಘಟ್ಟದಲ್ಲಿ, ಕೊರಗ ಮಹಿಳೆ ‘ಹಿಂದಿನ’ವರಿಗಿಂತ - ಈಗ ಹೆಚ್ಚು ಅದೃಷ್ಟಶಾಲಿ ಎನ್ನಬಹುದು. ಹಿಂದಿನಿಂದಲೂ ಕೊರಗ ಮಹಿಳೆಯ ಕುರಿತಾಗಿ, ಸಮಾಜದಲ್ಲಿರುವ - ಗೌರವಯುತವಾದ ಮಾತೃ ಭಾವನೆ ಮತ್ತು ಏಕತೆಯ ಪರಿಕಲ್ಪನೆ ಇತರ ಎಲ್ಲಾ ಆದಿವಾಸಿ (ಗಿರಿಜನ) ಮತ್ತು ಪ್ರಭಾವಶಾಲಿ ಸಮುದಾಯಕ್ಕಿಂತಲೂ ಕೊರಗ ಸಮುದಾಯದವರಲ್ಲಿ ಹೆಚ್ಚು ಪ್ರಗತಿಪರವಾಗಿದೆ. ಆದಿಕಾಲದ ಕೊರಗ ಮಹಿಳೆಯರು ತಮ್ಮ ದೇಹವನ್ನು ಸೊಪ್ಪು ಮತ್ತು ಅಲಂಕೃತ ಮಣಿಸರಗಳಿಂದ ಮುಚ್ಚಿಕೊಳ್ಳುತ್ತಿದ್ದರು. ಈಗ ಎಲ್ಲವೂ ಅನುಕೂಲಕರವಾಗಿ ಮಾರ್ಪಾಟಾಗಿದೆ. ಹಾಗಾಗಿಯೇ ಕೊರಗ ಮಹಿಳೆಯರು ‘ಹಿಂದಿನವರಿಗಿಂತ’ ಹೆಚ್ಚು ಅದೃಷ್ಠಶಾಲಿ ಎಂದಿರುವುದು.

ಕೊರಗ ಸಮುದಾಯವನ್ನು ಹೊರತು ಪದಿಸಿದರೆ ಒಟ್ಟು ಸಮಾಜದಲ್ಲಿ - ಮಹಿಳೆಯರ ಕುರಿತಾಗಿ ‘ತಾರತಮ್ಯ’ ಕಂಡು ಬರುತ್ತದೆ. ಮುಖ್ಯವಾಗಿ- ಹೆಣ್ಣು ಭ್ರೂಣ ಹತ್ಯೆ... ಶ್ರೀಮಂತ ಕುಟುಂಬಗಳು ತಮ್ಮ ಆಸ್ತಿ ಪಾಸ್ತಿ ಪರರ ಪಾಲಾಗಬಹುದೆಂಬ ಭೀತಿಯಲ್ಲಿ ಮತ್ತು ಗಂಡು ಮಗುವಾದರೆ ಆಸ್ತಿ ತಮ್ಮಲ್ಲೇ ಉಳಿಯಬಹುದೆಂಬ ದುರಾಲೋಚನೆಯಿಂದಾಗಿ- ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಾರೆ ಎಂಬುದು ವಾಸ್ತವವಾದರೆ, ಕೊರಗ ಸಮುದಾಯದಲ್ಲಿ ಇಂತಹ ಪ್ರಕರಣಗಳೇ ಕಂಡು ಬಂದಿಲ್ಲ. ಇದು ಕೊರಗರ ಹೃದಯ ಶ್ರಿಮಂತಿಕೆ. ಇದಕ್ಕೆ ಕೊರಗ ಸಮುದಾಯದ ಆಧರಣೀಯ ದೈವ ‘ಅಪ್ಪ- ಬೈಕಾಡ್ತಿ ’(ಕೊರಗ ಸಮುದಾಯದ ಕುಲದೈವ - ಕೊರಗ ತನಿಯನ ತಾಯಿ)ಯ ಭಯ - ಭಕ್ತಿ ಕಾರಣವಾಗಿರಬಹುದು.

ಇಂದಿನ ಔದ್ಯೋಗಿಕ ರಂಗ, ಸಂಘಟನೆ, ಶಿಕ್ಷಣ, ಆಧುನಿಕತೆ, ಸಮಾಜದ ಬದಲಾದ ದೃಷ್ಟಿಕೋನಗಳು ಹೆಚ್ಚು ಪ್ರಗತಿಪರವಾಗಿದೆ. ಒಟ್ಟು ಸಮಾಜ ಕೊರಗ ಸಮುದಾಯದಲ್ಲಿ ಮಹಿಳಾ ಹಿತಚಿಂತನೆಯ ದೃಷ್ಟಿಕೋನವನ್ನು ಅನುಸರಿಸಿದರೆ, ಎಲ್ಲಾ ಸಮುದಾಯದ ಮಹಿಳೆಯರೂ ಸುರಕ್ಷಿತರಾಗಬಹುದು.

- ಸುನೀತಾ ಸೂರ್ಯವಂಶ, ಬೆಳುವಾಯಿ

Friday 24 January 2014

ಜಾನಪದ ಕುಣಿತಗಳಲ್ಲಿ ಕೊರಗರ ಉಪಸ್ಥಿತಿ! ಏನಿದರ ಒಳಮರ್ಮ?



ಜಾನಪದ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಸಂಪ್ರದಾಯ ಬದ್ಧ ಕೊಡುಗೆಗಳನ್ನು ನೀಡುತ್ತಾ ಬಂದಿರುವುದೇ ತಳಮಟ್ಟದ ಸಮುದಾಯಗಳು. ಇವರು ತಮ್ಮ ಪಾಡ್ದಾನ, ಕುಣಿತ ಮತ್ತು ವೇಷಭೂಷಣಗಳಿಂದ ಜನಪದ ಕುಣಿತಗಳ ಸಿರಿವಂತಿಕೆಯನ್ನು ಈಗಲೂ ಉಳಿಸಿಕೊಂಡು ಬ
ಂದಿದ್ದಾರೆ. ಈ ಸಾಂಸ್ಕೃತಿಕ ವೈಭವದ ಹುಟ್ಟಿಗೆ ಕಾರಣವೇ, ಅನಕ್ಷರಸ್ಥತನ. ಇಂಥಹ ಜನಮನ ಸೂರೆಗೊಂಡ ಜಾನಪದ ಸೊಗಡಿನಲ್ಲಿ ಕೊರಗ ಅಸ್ತಿತ್ವ ಹೇಗಿತ್ತು? ಎಂಬುದಕ್ಕೆ ಇಲ್ಲಿದೆ ನಿದರ್ಶನ.

ಬಾಲೆ ಸಾಂತು :
ತುಳುನಾಡಿನ ಮರಾಠಿ ನಾಯ್ಕರ ಆಚರಣಾತ್ಮಕ ಕುಣಿತಗಳಲ್ಲಿ ‘ಬಾಲೆ ಸಾಂತು’ ಕೂಡಾ ಒಂದು. ಬಂಟ್ವಾಳ, ಎಣ್ಮಕಜೆ, ಕೋಡಂದೂರು ಮುಂತಾದ ಪ್ರದೇಶಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತಾದರೂ, ಇತ್ತೀಚೆಗೆ ಇದು ಎಲ್ಲೂ ಕಂಡು ಬಂದಿಲ್ಲ. ಈ ಒಂದು ಆಚರಣೆಯಲ್ಲಿ - ಪ್ರತ್ಯಕ್ಷವಾಗಿಯಲ್ಲದಿದ್ದರೂ, ಕೊರಗ ಜನಾಂಗದ ಉಪಸ್ಥಿತಿ ಇತ್ತು ಎಂದು ಡಾ.ಸ.ಚಿ. ರಮೇಶ್ ರವರ ‘ಕರ್ನಾಟಕದ ಜಾನಪದ ಆಚರಣೆಗಳು’ ಎನ್ನುವ ಪುಸ್ತಕದಿಂದ ತಿಳಿದು ಬರುತ್ತದೆ.
ಬಾಲೆ ಸಾಂತು ಕಲಾ ತಂಡದಲ್ಲಿ ಹನ್ನೊಂದು ಮಂದಿ ವೇಷಧಾರಿಗಳಿರುತ್ತಾರೆ. ಸನ್ಯಾಸಿ, ಅರ್ಚಕ(ಪೂಜೆ ಭಟ್ಟ), ಗುರಿಕಾರ, ಪೂಜಾರಿ( ದೈವ ನರ್ತಕ), ಕೊರಗ ಮತ್ತು ಕೊರಪೊಳು (ಕೊರಗ ಮಹಿಳೆ) ಸಾಹೇಬ ಮತ್ತು ಮಂಗ ಕುಣಿಸುವವ ಇತ್ಯಾದಿ. ಈ ವೇಷಧಾರಿಗಳು ಕಾಸರಕದ ಮರದಡಿ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಶಾರದಾಂಬೆಯನ್ನು ಸ್ಮರಿಸುತ್ತಾರೆ. ನಂತರ ಮನೆ - ಮನೆಗಳಿಗೆ ತೆರಳಿ, ಮರಾಠಿ ಭಾಷೆಯ ಹಾಡು ಹಾಡುತ್ತಾ... ‘ಶೃಂಗೇರಿಚೆ ಶಿಷ್ಯರಮಿ ಬಾಲ್ಚಾಲ್ಯೊ ಬಾಲೆ ಸಾಂತು, ಕಾಟ್ಮರೊ ಜೋಗಿರಮಿ ಬಾಲ್ ಬಾಲ್ಯೊ ಬಾಲೆ ಸಾಂತು’ ಎಂದು ಗುರಿಕಾರ ಹಾಡುತ್ತಿದ್ದಂತೆ - ಇತರ ಕಲಾವಿದರು ‘ಬಾಲ್ ಬಾಲೋ ಬಾಲ್ ಸಾಂತು’ ಎಂದು ಸೊಲ್ಲನ್ನು ಹಾಡುತ್ತಾ ಕುಣಿಯುತ್ತಾರೆ. ಬಾಲೆ ಸಾಂತು ಆಚರಣೆಯಿಂದ ಊರಿನ ಅನಿಷ್ಟ ದೂರವಾಗುತ್ತದೆ ಎಂದು ನಂಬುತ್ತಾರೆ.

ಚೆನ್ನು ಕುಣಿತ :
ಈ ಜನಪದ ನೃತ್ಯ ಪ್ರಕಾರವನ್ನು ‘ಕೋಪಾಲ’ (ನಲಿಕೆ) ಜನಾಂಗದವರು ಆಚರಿಸಿಕೊಂಡು ಬರುತ್ತಾರೆ. ಬೆಳ್ತಂಗಡಿ ಪ್ರಾಂತ್ಯದಲ್ಲಿ ಈ ವೇಷ ಹೆಚ್ಚಾಗಿ ಕಂಡು ಬರುತ್ತದೆ. ಕೋಪಾಲ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ - ‘ಚೆನ್ನು’ ವಿನ ಕುರಿತಾಗಿ ಆರಾಧಿಸಿ ನಲಿವ ನೃತ್ಯ ಪ್ರಕಾರವಿದು. ಈ ಚೆನ್ನು ವೇಷದ ಜೊತೆಯಲ್ಲಿ ಕೊರಗ ವೇಷವೂ ಇರುವುದು ವಿಶೇಷ!

ಕಂಗೀಲು ಕುಣಿತ :
ಇದು ಕರಾವಳಿ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಆರಾಧನಾ ಪದ್ಧತಿಯ ಪೂಜಾ ಕುಣಿತ. ಮಾಯಿ ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ , ಮೂರು ದಿನ ರಾತ್ರಿ ಮತ್ತು ಮೂರು ದಿನ ಹಗಲು - ಗೊಡ್ಡ ಜನಾಂಗದವರಿಂದ ನಡೆಸಿಕೊಂಡು ಬರುವ ವಿಶಿಷ್ಟ ಕುಣಿತ. ಪುರುಷ ಪ್ರಧಾನವಾದ ಈ ಕುಣಿತದಲ್ಲಿ - ಪಾತ್ರಧಾರಿಗಳು ತಮ್ಮ ಉಡುಪು ಮತ್ತು ಶಿರಸ್ತ್ರಾನವಾಗಿ ತೆಂಗಿನ ಸಿರಿಯನ್ನು ಕಟ್ಟಿಕೊಂಡು ಡೋಲು - ಚೆಂಡೆಯ ನಾದಕ್ಕೆ ತಕ್ಕುದಾಗಿ ಕುಣಿಯುತ್ತಾರೆ. ಇದರಲ್ಲಿ ‘ನಾಗಿ’ ಎನ್ನುವ ‘ಕೊರಗ ವೇಷ’ವೂ ಇರುತ್ತದೆ. ಈತನ ಸುತ್ತ ಇತರ ವೇಷಧಾರಿಗಳು ಕುಣಿಯುತ್ತಾರೆ. ಈ (ಕೊರಗ)ವೇಷ ಮನೆಯ ಹಿಂಬಾಗದಲ್ಲಿ ಹೋಗಿ ದಾನ ಪಡೆಯುವುದು ಮತ್ತು ಭಕ್ತಾದಿಗಳಿಗೆ ತನ್ನ ಹಣೆಯಲ್ಲಿನ ಕಪ್ಪು ಮಸಿ (ಕರಿಗಂಧ -- ಕೊರಗ ತನಿಯನ ಆರಾಧಕರು ಹಾಕುವುದು ಕೂಡಾ ಕರಿಗಂಧವನ್ನೇ!) ಯನ್ನು ಭಕ್ತಾಧಿಗಳ ಹಣೆಗೆ ಸೋಕಿಸುವುದು (ಸ್ಪರ್ಶಿಸುವುದಿಲ್ಲ!) ಕಂಗೀಲು ಆರಾಧನಾ ಪದ್ಧತಿಯ ವಿಶೇಷ!

ಇಲ್ಲಿ ಗಂಭೀರವಾದ ಪ್ರಶ್ನೆ ಎಂದರೆ, ಈ ಎಲ್ಲಾ ಜನಪದ ಪ್ರಕಾರಗಳ ಕುಣಿತಗಳಲ್ಲಿ ‘ಕೊರಗ’ರ ಮಧ್ಯಸ್ತಿಕೆ ಹೇಗೆ ಬಂದಿರಬಹುದು? ಏನು ಕಾರಣವಿರಬಹುದು? ಏನಿದರ ಒಳಮರ್ಮ? ಇತರ ತಳಮಟ್ಟದ ಸಮುದಾಯಗಳಿಗೂ, ಆದಿವಾಸಿ ಪಂಗಡದ ‘ಕೊರಗ’ ಜನರಿಗೂ ಏನಾದರೂ ‘ಸಾಂಸ್ಕೃತಿಕ - ಸಂಬಂಧ’ವಿರಬಹುದೇ? ಕೊರಗರ ವೇಷಗಳನ್ನು ಹಾಕುವುದು ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸುವುದು ‘ಅಜಲು ನಿಷೇಧ ಕಾಯಿದೆ’ಯ ಉಲ್ಲಂಘನೆಯಾಗುತ್ತದೆ. ಹೀಗಿರುವಾಗ - ಚೆನ್ನು ಕುಣಿತ, ಬಾಲೆ ಸಾಂತು ಮತ್ತು ಕಂಗೀಲು ನೃತ್ಯಗಳು - ಕಾಯಿದೆಯನ್ನು ಉಲ್ಲಂಘಿಸಿದಂತಾಗುವುದಿಲ್ಲವೇ? ಕೋಲ ನೃತ್ಯಗಳನ್ನು ಸಾರ್ವಜನಿಕ ರಂಗಸ್ಥಳದಲ್ಲಿ ಪ್ರದರ್ಶಿಸುವಂತಿಲ್ಲ. ಆದರೆ - ಇದೇ ರಂಗಕರ್ಮಿಗಳು (ದೈವನರ್ತಕರು) ‘ ಕೊರಗ ವೇಷ’ವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧವಾಗುವುದಿಲ್ಲವೇ? ಕೊರಗ ಅಭಿವೃದ್ಧಿ ಸಂಘಟನೆಗಳು ಮತ್ತು ಜಾನಪದ ವಿಶ್ಲೇಷಕರು ಏನೆನ್ನುತ್ತಾರೆ.


- ಜಿ. ಭವಾನಿ ಶಂಕರ ಕೊರಗ, ಬೆಳುವಾಯಿ

Tuesday 21 January 2014

ಗಿರಿ ಮುಟ್ಟದ ಕೊರಗರ ಕೂಗು


ಗಿರಿ ಮುಟ್ಟದ ಕೊರಗರ ಕೂಗು

ಕೊರಗರ ಮೊದಲ ಪದವೀಧರ ಗೋಕುಲದಾಸರ ಮನದಾಳದ ಮಾತುಗಳು:

ಕೊರಗರು ಕರಾವಳಿ ಭಾಗದ ಮೂಲ ನಿವಾಸಿಗಳು. ಅವರು ಬೆತ್ತಲೆ ಅಥವಾ ಅರೆ ಬೆತ್ತಲೆ ಇದ್ದವರು ಕಾಡಿನಲ್ಲಿ ಅಲೆದಾಡುತ್ತಾ ತಮಗೆ ಬೇಕಾದ ಆಹಾರವನ್ನು ಸಂಗ್ರಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಭಾರತಕ್ಕೆ ಜಲಮಾರ್ಗ ಶೋಧಿಸಿದ ಪೋರ್ಚುಗೀಸರು ಕರಾವಳಿ ಭಾಗದ ಹೇರಳ ಸಂಪತ್ತು ಕಂಡು ಬೆಕ್ಕಸ ಬೆರೆಗಾದರು. ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದರು. ಮುಂದೆ ಗೋವಾ ವಶಪಡಿಸಿಕೊಂಡರು. ಮತಾಂತರ ಮಾಡಿದರು. ಆ ಸಮಯದಲ್ಲಿ ಗೋವಾದಿಂದ ಹಲವಾರು ಜನ ವಲಸೆ ಬಂದರು. ಅವರು ಮಂಗಳೂರು ಮತ್ತು ಉಡುಪಿ ಸುತ್ತಾ ಮುತ್ತಾ ನೆಲೆ ನಿಂತರು. ಆ ವೇಳೆಗೆ ಆರ್ಯರು, ಬಂಟರು, ಜೈನರು ಮುಂತಾದ ’ಉನ್ನತ’ ಶ್ರೇಣಿಯವರು ಮೂಲ ನಿವಾಸಿಗಳಾದ ಕೊರಗರನ್ನು ಭಯಾನಕವಾಗಿ ಹಿಂಸಿಸಿ, ಕೊಂದಿದ್ದರು. ಈ ರಕ್ತಪಾತಕ್ಕೆ ಹೆದರಿದ ಅಳಿದುಳಿದ ಕೊರಗರು ಕಾಡುಗಳನ್ನು ಸೇರಿಕೊಂಡರು. ಕಾಡುಗಳಲ್ಲಿ ಭೂಗತ ಜೀವನ ನಡೆಸತೊಡಗಿದರು. ’ಉನ್ನತ’ ಸಮುದಾಯಗಳು ಇವರನ್ನು ನಾಯಿಗೆ ಇದ್ದ ಬೆಲೆಯೂ ಇರದಂತೆ ಮಾಡಿದರು. ಇವರ ದಬ್ಭಾಳಿಕೆಯ ವಿರುದ್ದ ಹೋರಾಡಿದವರು ಭೂತಗಳಾಗಿ ಹೋದರು.

ಭೂಮಿಯ ಮೂಲ ಒಡೆಯರಾದ ಇವರಿಗೆ ಭೂಮಿ ಇಲ್ಲದಂತೆ ಮಾಡಿದರು. ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಸಾಯುವಂತೆ ಮಾಡಿದರು. ಬ್ರಿಟಿಷರು ಭಾರತಕ್ಕೆ ಬಂದಾಗ ಇವರ ಸ್ಥಿತಿ ಹೇಗಿತ್ತು ಎಂದರೆ, ಕಾಡಿನ ಕೇಂದ್ರ ಭಾಗದಲ್ಲಿ ಊರಿನಿಂದ ಯಾರು ಪ್ರವೇಶಿಸಲು ಸಾದ್ಯವಾಗದ ಜಾಗದಲ್ಲಿ ತಾತ್ಕಲಿಕ ಗುಡಿಸಲು ಮತ್ತು ಗುಹೆಗಳನ್ನು ಮಾಡಿಕೊಂಡು ವಾಸಿಸುತ್ತಿದ್ದರು. ಕೆಲವು ಕೊರಗರು ಮೇಲ್ಜಾತಿಯವರು ತಿಂದು ಬಿಟ್ಟ ಎಲೆಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಅದರಲ್ಲಿ ಅಳಿದುಳಿದ ಆಹಾರವನ್ನು ಸಾದ್ಯವಾದಷ್ಟನ್ನು ಬೇರ್ಪಡಿಸಿ ಅದನ್ನು ಒಣಗಿಸಿ ತಿನ್ನುತಿದ್ದರು. ಮತ್ತೇ ಕೆಲವೊಂದು ಕೊರಗ ಗುಂಪುಗಳು ’ಉನ್ನತ’ ಜಾತಿಯವರ ಹೊಲಗಳಲ್ಲಿ ಜೀತಗಳಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕಟ್ಟುನಿಟ್ಟಿನ ಅಸ್ಪುಶ್ಯತೆಯನ್ನು ಆಚರಣೆಯಲ್ಲಿ ಇಡಲಾಗಿತ್ತು. ಇವರು ಮೇಲ್ಜಾತಿಯವರು ಆಚರಿಸುವ ಹಬ್ಬಗಳಲ್ಲಿ, ಪೂಜೆಗಳಲ್ಲಿ ದೇವಸ್ಥಾನದ ಒಂದು ಮೂಲೆಯಲ್ಲಿ ದೂರದಲ್ಲಿ ನಿಂತು ಡೋಲು ಬಾರಿಸಬೇಕಾಗಿತ್ತು. ಇವರಲ್ಲಿದ ಪ್ರಕೃತಿ ಪೂರಕ ಆಚರಣೆಗಳನ್ನು ಧಮನ ಮಾಡಿ ವೈಧಿಕ ಪೂಜೆಗಳನ್ನು ಬಲವಂತವಾಗಿ ಹೇರಲಾಯಿತು. ನೀಚದಾನ(ಅಜಲು ಪದ್ಧತಿ)ಯನ್ನು ಜಾರಿಗೆ ತಂದರು. ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಇವರ ಕುಶಲ ಕಲೆಗಳು, ಸಂಗೀತ ಇವೆಲ್ಲವನ್ನು ನಿಯಂತ್ರಿಸಿದರು. ಸಾದ್ಯವಾದಷ್ಟನ್ನು ಲೂಟಿ ಮಾಡಿ ಸಾಂಸ್ಕೃತಿಕ ಶ್ರೀಮಂತರಾದರು. ಕೊರಗರ ಸಮಾಧಿಯ ಮೇಲೆ ಬಂಗಲೆ ಕಟ್ಟಿಕೊಂಡು ಮೆರೆದರು.

ಇಂತಹ ಉಸಿರುಗಟ್ಟಿಸುವಂತಹ ಸ್ಥಿತಿಯಲ್ಲಿದ್ದಾಗಲೂ ಪದವಿ ಪಡೆದ ಗೋಕುಲದಾಸರು ತೆರೆದಿಟ್ಟ ಸತ್ಯಾಸಂಗತಿಗಳು ನನ್ನನ್ನು ಬೆರಗುಗೊಳಿಸಿತು. ಅವರ ಮಾತುಗಳಿವು.

ನನ್ನನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ: ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಮ್ಮ ಮೂಲ ಊರು ಕಾರ್ಕಳದಿಂದ ೧೮ ಕಿ.ಮೀ. ದೂರದ ಒಂದು ಹಳ್ಳಿ. ಅದು ಕಾಡಿನ ಮಧ್ಯೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಶಿಕ್ಷಣವನ್ನು ಆರಂಭಿಸಿದರು. ಅಲ್ಲಿಯವರೆಗೆ ಕೊರಗರಿಗೆ ಅಕ್ಷರ ಜ್ಞಾನ ಇರಲೇ ಇಲ್ಲ. ಏಕೆಂದರೆ, ಅದು ನಿಷಿದ್ಧವಾಗಿತ್ತು. ೧೮೦೦ರಲ್ಲಿ ಕುದುಮುಳ ರಂಗರಾಯ್ ಎಂಬುವರು ಅಸ್ಪುಶ್ಯರಿಗಾಗಿ ಶಾಲೆಯೊಂದನ್ನು ತೆರೆದರು. ರಾಜ್ ಭಾಪುಲೆ ಸಹ ಅವರ ಕಾಲಾಮಾನದವರು. ಅವರು ಕಾಡಿಗೆ ಬಂದು ಶಾಲೆಗೆ ಬರುವಂತೆ ನನ್ನನು ಕರೆದರು. ನಾನು ಹೆದರಿ ಹೋಗಲಿಲ್ಲ. ಕೊನೆಗೆ ಬಲವಂತವಾಗಿ ಶಾಲೆಗೆ ಕರೆತಂದರು. ನನಗೆ ಊರಿಗೆ ಬಂದರೆ ಸಾಯಿಸಿಬಿಡುತ್ತಾರೆ ಎಂಬ ಭಯ ಇತ್ತು. ನಾನು ಮೊದಲ ಭಾರಿ ಶಾಲೆಗೆ ಹೋಗಿ ಬದುಕಿ ಹಿಂದುರುಗಿ ಹೋದಾಗ ಸ್ವಲ್ಪ ಧೈರ್ಯ ಬಂತು. ನನ್ನನ್ನು ಯಾರು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಅಪ್ಪಿ-ತಪ್ಪಿ ಮುಟ್ಟಿಸಿಕೊಂಡರು ಸ್ನಾನ ಮಾಡುತ್ತಿದ್ದರು. ಕುದುಮುಳ ರಂಗರಾಯರು ಕೊರಗ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಭೂಮಿ ಕೊಡಬೇಕು ಎಂದರು. ಆದರೆ ಸರ್ಕಾರಗಳು ಗಮನ ಹರಿಸಲಿಲ್ಲ, ಆದರೂ ಒಂದು ಕಾಯ್ದೆ ಬಂದಿತ್ತು. ’ಶೋಷಿತ ವರ್ಗಕ್ಕೆ ಭೂಮಿ’ ಎಂಬ ಕಾಯ್ದೆಯದು. ಅದರಲ್ಲಿಯೂ ಕೊರಗರು ಭೂಮಿ ತೆಗೆದುಕೊಳ್ಳಲು ಹೋಗಲಿಲ್ಲ. ಅವರು ಹೆದರಿ ಕೊಂಡರು. ಏಕೆಂದರೆ ಭೂಮಿ ತೆಗೆದುಕೊಂಡವರನ್ನು ’ಮೇಲ್ಜಾತಿ’ಯವರು ಕೊಂದು ಹಾಕಿದರು.

ಮೇಲಿನ ನೀರು ಮೇಲೆ ಕೆಳಗಿನ ನೀರು ಕೆಳಗೆ: ನಾನು ೭ ನೇ ತರಗತಿ ಓದುತ್ತಿದ್ದೇನು. ಬಂಟರ ಹುಡುಗನೊಬ್ಬ ನನ್ನ ಸ್ನೇಹಿತನಾಗಿದ್ದನು. ಅವನು ನನ್ನನು ಎಲ್ಲರೂ ಕಾಣುವಂತೆ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಗೊತ್ತಾದರೆ ಮನೆಯವರು ಅವನಿಗೆ ಹೊಡೆಯುತ್ತಿದ್ದರು. ಒಂದು ದಿನ ಇದಕ್ಕಿದಂತೆ ಶಾಲೆಗೆ ರಜೆ ಘೋಷಿಸಿದರು. ನಾವು ಖುಷಿಯಿಂದ ಮನೆಗೆ ನಡೆದು ಹೋಗುತ್ತಿದ್ದೇವು. ಮನೆ ಇನ್ನೂ ೨ ಮೈಲಿ ದೂರ ಇತ್ತು. ಬಂಟರ ಹುಡುಗ(ಸ್ನೇಹಿತ)ನಿಗೆ ತುಂಬಾ ಬಾಯಾರಿಕೆಯಾಯಿತು. ಅಲ್ಲೇ ಹತ್ತಿರದಲ್ಲಿ ಇದ್ದ ಸೂರಣ್ಣನ ಅಂಗಡಿಗೆ ಹೋಗಿ ನೀರು ಕುಡಿದುಕೊಂಡು ಬರೋಣ ಎಂದು ಕರೆದುಕೊಂಡು ಹೋದನು. ಅಲ್ಲಿ ಅವನು ನೀರು ಕುಡಿದನು. ನನಗೂ ತುಂಬಾ ಬಾಯಾರಿಕೆಯಾಗಿತ್ತು. ನನಗೆ ಸ್ನೇಹಿತ ನೀರುಕೊಡಲು ಬಂದಾಗ ಅಂಗಡಿಯ ಮಾಲಿಕನಾದ ಸೂರಣ್ಣ ಕೆಳಗಿನ ನೀರು ಕೆಳಗೆ, ಮೇಲಿನ ನೀರು ಮೇಲೆ ಎಂದು ಹೇಳಿ ನೀರನ್ನು ಕೊಡದೆ ಕಿತ್ತುಕೊಂಡನು. ಹತ್ತಿರದಲ್ಲೆ ಇದ್ದ ತೆಂಗಿನ ಚಿಪ್ಪಿನಿಂದ ನೀರು ಕುಡಿಯಲು ಸ್ನೇಹಿತ ಹೇಳಿದನು. ಆದರೆ ನನಗೆ ಅವಮಾನವಾಗಿದ್ದರಿಂದ ನೀರು ಕುಡಿಯಲಿಲ್ಲ. ಮನಸ್ಸಿನಲ್ಲಿಯೇ ಹಳ್ಳದಲ್ಲಿ ಹರಿಯುವ ಸ್ವಚ್ಚ ನೀರು ಕುಡಿಯುತ್ತೇನೆ, ನಿಮ್ಮ ಕೊಳಕು ನೀರು ಬೇಡ ಎಂದು ನಿರ್ದರಿಸಿದೆ. ವಿಜ್ಞಾನದಲ್ಲಿ ನಮ್ಮ ಗುರುಗಳು ಹೇಳಿಕೊಟ್ಟ ಪಾಠ ’ನೀರು ಮೇಲಿನಿಂದ ಕೆಳಗೆ ಹರಿಯುತ್ತದೆ’ ಎಂಬುದು ಅವತ್ತು ನನಗೆ ವಿಚಿತ್ರವಾಗಿ ಕಂಡಿತ್ತು. ಇಂತಹ ಹಲವಾರು ಅವಮಾನಗಳ ನಡುವೆ ಮೆಟ್ರೇಕ್ಯುಲೇಷನ್ ಮುಗಿಸಿದೆ. ದಿಟ್ಟತನ ಮಾಡಿ ಪದವಿ ಓದಿದೆ. ಪೋಸ್ಟ ಮಾಸ್ಟರ್ ಆಗಿ ಕೂಡ ಕೆಲಸ ಮಾಡಿದೆ.

ಪೌರಕಾರ್ಮಿಕರಾಗಿ ಸಿಟಿಗೆ ಬಂದರು: ಕೊರಗರು ಅಸ್ಪುಶ್ಯರಿಗಿಂತ ಅಸ್ಪುಶ್ಯರು. ಅವರಿಗೆ ಶಿಕ್ಷಣ ಇಲ್ಲ. ಇದ್ದರೂ ಅದು ಕೇವಲ ೦.೦೧% ಮಾತ್ರ. ಅಲ್ಲದೆ ನಮಗೆ ಕೃಷಿ ಬಿಟ್ಟು ಬೇರೆ ಕಸಬು ಗೊತ್ತಿಲ್ಲ. ಕೃಷಿ ಮಾಡುವುದಕ್ಕೆ ಭೂಮಿ ಇಲ್ಲ. ’ಕುಕ್ಕೆ’ ಹೆಣೆಯುವ ಕೆಲಸ ಮಾಡುತ್ತಿದ್ದೇವು. ಪ್ಲಾಸ್ಟಿಕ್ ಬಂದು ಅದನ್ನು ಕಿತ್ತು ಕೊಂಡಿತು. ಬದುಕಾ ಬೇಕಲ್ಲ! ಸಿಟಿಗೆ ವಲಸೆ ಬಂದರು. ೧೮೬೫ರಲ್ಲಿ ಮಂಗಳೂರು ಪುರಸಭೆ ಸ್ಥಾಪನೆಯಾಯಿತು. ನಮ್ಮನು ಕಸ ಗುಡಿಸಲು, ಮಲಹೊರಲು ಸೇರಿಸಿಕೊಂಡರು. ಪೌರಕಾರ್ಮಿಕರಾಗಿ ದುಡಿಯಲು ನಿಂತೆವು. ಕೇವಲ ಊಟಕೋಸ್ಕರ ದುಡಿದೆವು. ನಮಗೆ ಪ್ರತ್ಯೇಕ ಕಾಲೋನಿಗಳಿವೆ. ನಗರದಲ್ಲಿ ಅವುಗಳನ್ನು ಸ್ಲಂ ಅನ್ನುತಾರೆ. ೧೯೮೬ರಲ್ಲಿ ಎಸ್.ಟಿ ಯಿಂದ ಎಸ್.ಸಿ ಗೆ ಸೇರಿಸಿದರು. ಆದರೂ ಪ್ರಯೋಜನ ಆಗಿಲ್ಲ. ಈಗಲೂ ನಾವು ಪೌರಕಾರ್ಮಿಕರಾಗಿಯೇ ಇದ್ದಾರೆ.

ಒಟ್ಟು ೧೭೦೦೦ ಇದ್ದಾರೆ: ಕೊರಗರ ಗಣತಿ ಸರಿಯಾದ ರೀತಿಯಲ್ಲಿ ಆಗಿಲ್ಲ. ಒಂದು ಅಂದಾಜಿಗೆ ಹೇಳುವುದಾದದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೬ರಿಂದ ೭ ಸಾವಿರ ಇದ್ದಾರೆ. ಕಾಸರಗೂಡಿನಲ್ಲಿ ೨ ಸಾವಿರದಷ್ಟಿದ್ದಾರೆ. ಬೈಂದೂರು ಮತ್ತು ಉಡುಪಿ ಸುತ್ತಮುತ್ತ ೮-೯ ಸಾವಿರ ಇರಬಹುದು. ಒಟ್ಟು ೧೭೦೦೦ ಜನ ಕೊರಗರು ಇರಬಹುದು. ಜನಗಣತಿಯಲ್ಲಿ ಸರಿಯಾದ ಅಂಕಿಅಂಶ ಸಿಗೋದಿಲ್ಲ. ಕೊರಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಬರುತ್ತಿದೆ. ಇದಕ್ಕೆ ಅವರ ಅತಿಯಾದ ದುಡಿತ, ಕಾಯಿಲೆಗಳು, ನಮ್ಮಲ್ಲಿರುವ ಮೂಢನಂಬಿಕೆಗಳು ಕಾರಣವಾಗಿವೆ.

ಎಲ್ಲಾ ಹಬ್ಬವೂ ನಮ್ಮದೇ: ಕೊರಗಲ್ಲಿ ಅನೇಕ ಹಬ್ಬಗಳಿವೆ. ಹಬ್ಬಗಳೆಲ್ಲ ಪ್ರಕೃತಿಗೆ ಒಳಿತನ್ನು ಬಯಸುವುಗಳಾಗಿವೆ. ಉದಾಹರಣೆಗೆ ಕೊರಲ್‌ಪರ್ಬ ಹಬ್ಬ. ಭತ್ತದ ಪೈರನ್ನು ಬಾಗಿಲಿಗೆ ಕಟ್ಟುವ ಹಬ್ಬ. ಅವತ್ತು ಭೂಮಿ ಪೂಜೆ ಮಾಡುತ್ತೇವೆ. ಅದು ಫಲವತ್ತತೆಯ ಹಬ್ಬವಾಗಿದೆ. ನಮಗೆ ಹಬ್ಬ ಅಂದರೆ ಯಾವತ್ತು ನಾವು ಖುಷಿಯಿಂದ ವಿಶೇಷ ಅಡಿಗೆ ಮಾಡಿ ತಿನ್ನುತ್ತೇವೆಯೋ ಅವತ್ತು ನಮಗೆ ಹಬ್ಬ. ವೈಧಿಕರು ಆಚರಿಸುವ ಬಹುತೇಕ ಹಬ್ಬಗಳು ನಮ್ಮವು. ನಮ್ಮ ಹಬ್ಬಗಳನ್ನು ನಮ್ಮಿಂದ ಕಿತ್ತುಕೊಂಡು ಅದಕ್ಕೆ ವೈಧಿಕ ಲೇಪನ ಮಾಡಿದ್ದಾರೆ. ಎಲ್ಲಾ ಹಬ್ಬಗಳು ನಮ್ಮವೇ ಆದರೆ ಯಾವುದು ನಮ್ಮದಲ್ಲ ಎನ್ನುವಂತಾಗಿದೆ. ನಾವು ಪ್ರಕೃತಿಯನ್ನು ಆರಾಧಿಸತ್ತೇವೆ. ಕೊರಗಜ್ಜ ನಮ್ಮ ಕುಲದೈವ. ನಾವು ಹುಟ್ಟು-ಸಾವು ಎರಡಕ್ಕೂ ಒಂದು ಕಲ್ಲನ್ನು ಸಂಕೇತವಾಗಿ ಇಡುತ್ತೇವೆ. ಅದಕ್ಕೆ ’ಮಾಂಜಾ’ ಅನ್ನುತ್ತೇವೆ.

ಕೊಂದರು, ಮಾಯವೆಂದರು, ಭೂತವಾಗಿಸಿದರು: ಕೊರಗಜ್ಜ ನಮ್ಮ ಕುಲದ ನಾಯಕ. ಇವರ ಭೂತ ಪೂಜೆ ಮಾಡಿದಾಗ ಸಂಕೇತವಾಗಿ ಗೆಜ್ಜೆ ಮತ್ತು ಕತ್ತಿ ಇಡುತ್ತಾರೆ. ಅವನನ್ನು ವೈಧಿಕರು ಕೊಂದರು. ಅಮೇಲೆ ಮಾಯವಾದನು ಎಂದರು. ಕೊರಗಜ್ಜ ಮಹಾಪರಕ್ರಮಿಯಾಗಿದ್ದನು. ಅವನಿಗೆ ಏಳು ಮಂದಿಯ ಶಕ್ತಿ ಇತ್ತು. ಮೇಲ್ಜಾತಿಯ ದೌರ್ಜನ್ಯವನ್ನು ಮೆಟ್ಟಿ ನಿಂತವನಾಗಿದ್ದನ್ನು. ಮೇಲ್ಜಾತಿಯವರು ಅವನಿಗೆ ಹೆದರಿದರು. ವಂಚನೆಯಿಂದ ಅವನನ್ನು ಕೊಂದು ಹಾಕಿದರು. ಭೂತವನ್ನಾಗಿ ಮಾಡಿದರು. ವೈಧಿಕರ ವಿರುದ್ದ ಹೋರಾಡಿದ ನಾಯಕನಿಗೆ ಗುಡಿ ಕಟ್ಟಿಸಿ ಪೂಜೆ ಮಾಡಿಸುತ್ತಾರೆ ನನಗೆ ಅದರಲ್ಲಿ ಒಮ್ಮತವಿಲ್ಲ. ಈ ಭಾಗದಲ್ಲಿ ಅನೇಕ ನೀಚಕಲ್ಲುಗಳಿವೆ. ಅದನ್ನು ಮಾತ್ತಿಕಲ್ಲು ಎಂದೂ ಸಹ ಕರೆಯುತ್ತೇವೆ. ದೇವಸ್ಥಾನದ ಮುಂದೆ ಒಂದು ಕಲ್ಲು ನಿಲ್ಲುಸುತ್ತಾರೆ. ಅಲ್ಲಿ ಬಲಿ ಕೊಡುತ್ತಾರೆ. ಮೊದಲೆಲ್ಲ ನರಬಲಿ ಕೊಡುತ್ತಿದ್ದರು. ಈಗ ಪ್ರಾಣಿಬಲಿ ಕೊಡುತ್ತಾರೆ. ಇವೆಲ್ಲವು ನಮ್ಮನ್ನು ನಿರ್ನಾಮ ಮಾಡಲು ಮಾಡಿದ ತಂತ್ರಗಳಾಗಿವೆ.

ಸಹ ಬೋಜನ ಎಲ್ಲಾ ಸುಳ್ಳು: ನಮ್ಮ ಪಾಲಿಗೆ ದೇವರು ಅಂಬೇಡ್ಕರ್. ಅವರು ಧರ್ಮಚಾರಣೆಗಳಿರುವ ಮನುಸ್ಪುತಿ ಸುಟ್ಟು ಹಾಕಿ ನಮಗೆ ನ್ಯಾಯ ಕೊಡಿಸಲು ಹೋರಾಡಿದವರು. ನಾವು ಅವರ ಹಾದಿಯಲ್ಲಿದ್ದೇವೆ. ಭೂಮಿ ಮತ್ತು ಶಿಕ್ಷಣ ನಮ್ಮ ಹೋರಾಟದ ಮೂಲ ಮಂತ್ರವಾಗಿದೆ. ಸರ್ಕಾರಗಳು ಭೂಮಿ ಕೊಟ್ಟಿದ್ದೇವೆ, ಅಸ್ಪುಶ್ಯತೆ ಇಲ್ಲ. ಎಂಬ ನಾಟಕ ಆಡುತ್ತಿದೆ. ಅವರ ಪ್ರಕಾರ ಸಹಬೋಜನ ಎಂದರೆ ದುಡ್ಡು ಕೊಟ್ಟು ಹೋಟೆಲ್‌ನಲ್ಲಿ ಊಟ ಮಾಡುವುದು. ಒಂದೇ ಬಸ್ಸಿನಲ್ಲಿ ಹೋಗುವುದು ಎಂದು ಹೇಳುತ್ತಿದ್ದಾರೆ. ಅವರವರ ಮನೆಗಳಲ್ಲಿ ಸಹಬೋಜನವು ಇಲ್ಲ ಸಹವರ್ತಿಯೂ ಇಲ್ಲ. ಎಲ್ಲಾ ಅಸ್ಪುಶ್ಯತೆಯೇ ಆಗಿರುತ್ತದೆ. ನಮ್ಮವರು ಕೂಡ ದೇವಸ್ಥಾನಗಳ ಒಳಗೆ ಹೋಗಲು ಹೆದರುತ್ತಾರೆ. ನಮಗೆ ದೇವರ ಭಯವಿಲ್ಲ. ದೇವರನ್ನು ಕೂಡಿ ಹಾಕಿಕೊಂಡಿರುವವರು ದಂಡಿಸುತ್ತಾರೆ, ಪೆಟ್ಟು ಕೊಡುತ್ತಾರೆ ಎಂಬ ಭಯವಿದೆ.

ಕೊರಗರಿಗೆ ಮಾತ್ರ ಅರ್ಥವಾಗುವ ಭಾಷೆ: ಎಲ್ಲಾ ಭಾಷೆಗಳು ಪ್ರಕೃತಿಯಿಂದಲೇ ಹುಟ್ಟಿವೆ. ಪ್ರಕೃತಿಯ ಶಬ್ಧಗಳನ್ನು ಮನುಷ್ಯ ಅನುಸರಿಸುತ್ತಾ ಭಾಷೆ ಮಾಡಿಕೊಂಡಿದ್ದಾನೆ. ನಮ್ಮದು ಒಂದು ಭಾಷೆ ಇದೆ. ಅದಕ್ಕೆ ’ಕೊಟ್ಟ’ ಅಂತ ಕರೆಯುತ್ತಾರೆ. ವೀರಪ್ಪ ಮೊಹ್ಲಿ ಅದರ ಬಗ್ಗೆ ಬರೆದಿದ್ದಾರೆ. ಇದಕ್ಕೆ ಲಿಪಿ ಇಲ್ಲ. ಸಮುದಾಯದ ಹೊರಗೆ ಇದ್ದಾಗ ನಾವು ಈ ಭಾಷೆ ಬಳಸುವುದಿಲ್ಲ. ನಮ್ಮ ರಕ್ಷಣೆಗಾಗಿ, ನಮ್ಮವರೆ ಇದ್ದಾಗ ನಾವು ಈ ಭಾಷೆ ಮಾತಾನಾಡುತ್ತೇವೆ. ಬೇರೆಯವರು ಇದ್ದಾಗ, ಕನ್ನಡ ತುಳು ಅಥವಾ ಕೊಂಕಣಿಯಲ್ಲಿ ಮಾತಾನಾಡುತ್ತೇವೆ.

ನಮಗೆ ಭೂಮಿ ಬೇಕು: ೧೯೮೭ರಲ್ಲಿ ಕಾಪುವಾರು ದೇವದಾಸ ಶೆಟ್ಟಿ ಕೊರಗ ಸಂಘ ಮಾಡಿದರು. ಅದರ ಮೂಲಕ ಹಲವಾರು ಹೋರಾಟಗಳನ್ನು ಮಾಡಿದೆವು. ನಮಗೆ ಕೃಷಿ ಮಾಡಲು ಭೂಮಿ ಬೇಕು. ಉಪ ಕಸಬುಗಳಿಗೆ ತರಬೇತಿ ನೀಡಬೇಕು. ಅದಕ್ಕೆ ಪ್ರೋತ್ಸಾಹ ಕೊಡಬೇಕು. ಹೆಚ್ಚು ಹೆಚ್ಚು ಶಿಕ್ಷಣ ಕೊಡಬೇಕು. ಸಮಾನತೆ ಬೇಕು. ಎಲ್ಲರಂತೆ ಸಮಾಜದಲ್ಲಿ ನಾವು ಬಾಳುವಂತಗಬೇಕು. ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗಬೇಕು. ಇವೆಲ್ಲದಕ್ಕಾಗಿ ನಾನು ಬದುಕಿರುವರಗೆ ಹೋರಾಡುತ್ತೇನೆ. ಇದು ನನ್ನ ಆಸೆ.

ಹೀಗೆ ಮನದಾಳದ ಮಾತುಗಳನ್ನು ಗೋಪಾಲದಾಸರು ನಮ್ಮಲ್ಲಿ ಹಂಚಿಕೊಂಡರು. ಕೊರಗರು ಸಮಾಜದಲ್ಲಿ ಯಾವ ಸ್ಥಿತಿಯಲ್ಲಿ ಇದ್ದಾರೆ? ಈ ಸ್ಥಿತಿಗೆ ಕಾರಣರು ಯಾರು? ಇವರಿಗೆ ನಿಜವಾಗಿ ಬೇಕಿರುವುದು ಏನು? ಎಂಬುದು ನಮಗೆ ತಿಳಿಯಬೇಕು. ಮಾನವ ಹಕ್ಕುಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ನಮಗೆ ಕೊರಗರ ಕೂಗು ಕೇಳಿಸುವುದಿಲ್ಲ. ’ಅಸ್ಪುಶ್ಯತೆ ಇಲ್ಲವೆ ಇಲ್ಲ’ ಎಂದು ಬಡಾಯಿ ಕೊಚ್ಚಿ ಕೊಳ್ಳುತ್ತೇವೆ. ಆದರೆ ವಾಸ್ತವತೆ ನಾವು ಅಂದುಕೊಂಡಿದಕ್ಕಿಂತ ತೀರ ಭಿನ್ನವಾಗಿರುತ್ತದೆ. ಉದ್ಯೋಗ ಖಾತ್ರಿ ಯೋಜನೆ. ಕೊರಗರಿಗೆ ಮುಟ್ಟೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಗಾಕ್ಕೆ ಸಂಬಂಧಿಸಿದಂತೆ ೧೨೦ ದೂರುಗಳಿವೆ. ಕೊರಗರ ಪರವಾಗಿ ಅನೇಕ ಸಂಘಸಂಸ್ಥೆಗಳು ಕೂಡ ಕೆಲಸ ನಿರ್ವಹಿಸುತ್ತಿವೆ. ಕೊರಗರು ಸಂವಿಧಾನದ ಆಶಯದಂತೆ ಬದುಕುವಂತಾದರೆ ಎಲ್ಲರ ಪ್ರಯತ್ನಗಳು ಸಾರ್ಥಕವಾಗುತ್ತದೆ.


-ಜಗದೀಶ ಡಿ

Tuesday 14 January 2014

ಕುಪೋಷಣೆಯೇ ಕೊರಗರನ್ನು ಬಿಟ್ಟು ತೊಲಗು...

'ಕುಪೋಷಣೆ ಎಂದರೆ ಶಾರೀರಿಕ ಮತ್ತು ಮಾನಸಿಕ ದುರ್ಬಲತೆ' ಎನ್ನುತ್ತಾರೆ - ಕುಪೋಷಣೆ ವಿರುದ್ಧ ಜಾಗೃತಿ ಮೂಡಿಸುವ ಜಾಹಿರಾತೊಂದರಲ್ಲಿ ನಟ ಅಮೀರ್ ಖಾನ್.

ಕುಪೋಷಣೆ ಮತ್ತು ಹಸಿವು ರಾಷ್ಟ್ರೀಯ ಸಮಸ್ಯೆಯಾಗಿದೆ. ಸಧೃಡ ಸಮಾಜಕ್ಕೆ ಮಕ್ಕಳೇ ಆಧಾರ. ಎಳೆಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದಿದ್ದರೆ ಮಕ್ಕಳಲ್ಲಿ ಕುಪೋಷಣೆ ಉಂಟಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಪೋಷಕಾಂಶಗಳ ಕೊರತೆಯಿಂದ ಅಂಗಹೀನತೆ ಉಂಟಾಗುತ್ತದೆ.
ಕುಪೋಷಣೆ ಹೊಂದಿರುವ ಮಗು ಕಡಿಮೆ ತೂಕ ಹೊಂದಿರುತ್ತದೆ. ಹಾಗು ಮಗು ಬೆಳೆದಂತೆಲ್ಲಾ ವಯಸ್ಸಿಗೆ ತಕ್ಕ ತೂಕವನ್ನು ಹೊಂದುವುದಿಲ್ಲ. ಮಗುವಿನ ಚಟುವಟಿಕೆಗಳು ಚೈತನ್ಯಪೂರಕವಾಗಿರುವುದಿಲ್ಲ. ತೀವ್ರ ಬಲಹೀನತೆ, ಪಾದ ಮತ್ತು ಮುಖದಲ್ಲಿ ಊತ, ಅತಿಸಾರ ಬೇಧಿ ,ಕೂದಲು ಕಂದು ಬಣ್ಣಕ್ಕೆ ತಿರುಗುವುದು, ಹಸಿವು ಕಡಿಮೆಯಾಗುವುದು, ರಕ್ತಹೀನತೆ, ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು - ಇವು ಕುಪೋಷಣೆಯ ಲಕ್ಷಣಗಳು.
ಬಡತನ, ಮೂಡನಂಬಿಕೆ, ಅನಕ್ಷರತೆ, ಲಿಂಗ ತಾರತಮ್ಯ, ಬಾಲ್ಯ ವಿವಾಹ, ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ, ಸಮರ್ಪಕ ಎದೆಹಾಲು ಉಣಿಸದೇ ಇರುವುದು, ಗರ್ಭಿಣಿಯರಿಗೆ ಪೂರಕ ಆಹಾರ ನೀಡದೆ ಇರುವುದು, ಸ್ವಚ್ಛತೆ ಅನುಸರಿಸದಿರುವುದು ಇವು ಅಪೌಷ್ಟಿಕತೆ ಮತ್ತು ಕುಪೋಷಣೆಗೆ ಕಾರಣವಾಗುತ್ತದೆ.

ಕೊರಗ ಆದಿವಾಸಿಗಳಲ್ಲಿ ಕುಪೋಷಣೆ...


ಕಾಡಿನ ಮಕ್ಕಳಾಗಿ - ಪ್ರಕೃತಿಯ ಆರಾಧಕರಾಗಿ, ತಮ್ಮ ಹಸಿವು, ಉಸಿರು, ಬಾಯಾರಿಕೆ, ನೋವು, ನಲಿವು, ಸಾಮಾಜಿಕ - ಸಾಂಸ್ಕ್ರತಿಕ ಬದುಕನ್ನೆಲ್ಲವನ್ನೂ - ಕಾಡಿನೊಂದಿಗೆ ಬೆಸೆದುಕೊಂಡಿರುವ ಆದಿವಾಸಿಗಳ ಬದುಕು ಖಂಡಿತವಾಗಿಯೂ ಆರೋಗ್ಯಪೂರ್ಣವೇ ಆಗಿತ್ತು. ಎಲ್ಲೂ ಕಲುಷಿತವಾಗದ ನೀರು, ಗಾಳಿ, ಪೌಷ್ಟಿಕಾಂಶದ ಎಲ್ಲಾ ಘಟಕಗಳನ್ನು ತನ್ನಲ್ಲಿ ಮೇಳೈಸಿಕೊಂಡ - ಪ್ರಕೃತಿಯ ಕೊಡುಗೆಗಳಾದ ಗೆಡ್ಡೆ, ಗೆಣಸು, ಸೊಪ್ಪು, ನಾರು, ಬೇರು, ವನಸ್ಪತಿಗಳು, ಪ್ರಾಣಿ - ಪಕ್ಷಿಗಳು ಆದಿವಾಸಿಗಳ ಆಹಾರದ ಮೂಲಗಳಾಗಿದ್ದವು.
ಹಸಿವು ಬಾಯಾರಿಕೆಗಾಗಿ ಕಾಡಿನಲ್ಲಿ ಯತೇಚ್ಛವಾಗಿ ದೊರಕುತ್ತಿದ್ದ ಗೆಡ್ಡೆ ಗೆಣಸು, ಸೊಪ್ಪು, ಉತ್ಕೃಷ್ಟಮಟ್ಟದ ಜೇನು ಇತ್ಯಾದಿಗಳೊಂದಿಗೆ ಸಚ್ಚಂದವಾಗಿ ಬೇಟೆಯಾಡಿ ತಂದ ಪೌಷ್ಟಿಕಾಂಶಯುಕ್ತ ಪ್ರಾಣಿ ಪಕ್ಷಿಗಳ ಮಾಂಸಗಳ ಮೂಲಕ ಆಹಾರ ಸೇವನೆ ಸಾಧ್ಯವಾಗಿದ್ದ ಕಾಲವಿತ್ತು. ಕಾಡು ಮತ್ತು ಕಾಡಿನ ಮೇಲೆ ಸರಕಾರದ ಹಿಡಿತ ಬಿಗಿಯಾದಾಗ ಆದಿವಾಸಿಗಳ ಬದುಕಿನಲ್ಲಿಯೂ ಗಾಢ ಪರಿಣಾಮವನ್ನು ಬೀರಿತು.
ಕಾಡು ಕಡಿದು ನಾಡಾಗಿಸಿದ, ತೋಟವಾಗಿಸಿದ ನಾಗರೀಕತೆ ಎನಿಸಿಕೊಂಡ - ಅಭಿವೃದ್ಧಿ ಹೆಸರಿನ ಭರಾಟೆಯಲ್ಲಿ ಸಿಲುಕಿ ಒದ್ದಾಡುವ ಆದಿವಾಸಿ ಸಮುದಾಯದ ಜನರ ಸ್ಥಿತಿ ಚಿಂತಾಜನಕವಾಯಿತು. ಪ್ರಕೃತಿಯಲ್ಲಿ ಸಂಭವಿಸಿದ ವಿಕೃತಿಯ ಅಭಿವೃದ್ಧಿಯ ಮಧ್ಯೆ ತುತ್ತು ಹೊತ್ತಿನ ಬದುಕಿಗಾಗಿ ವಿಲವಿಲನೆ ಒದ್ದಾಡುವ ಸನ್ನಿವೇಶ ನಿರ್ಮಾಣವಾಯಿತು. ಕಾಲ ಬದಲಾದಂತೆ ಆದಿವಾಸಿಗಳು ಕೂಡಾ ಬದಲಾವಣೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ವಾಲಬೇಕಾಯಿತು. ಸಂಮೃದ್ಧ ಆಹಾರ ವಸ್ತುಗಳಿಗೆ ಕೊರತೆಯುಂಟಾಯಿತು. ನೈಸರ್ಗಿಕವಾಗಿ ದೊರಕುತ್ತಿದ್ದ ಗೆಡ್ಡೆ - ಗೆಣಸುಗಳ ಜಾಗದಲ್ಲಿ ಯಾರೋ, ಹೇಗೋ ಬೆಳೆಸಿದ ತರಕಾರಿಗಳು ಬಂದವು. ಪರಿಶುದ್ಧ ತಂಪು ಪಾನೀಯಗಳ ಬದಲು ನಗರೀಕರಣ, ಕೈಗಾರೀಕರಣ, ಯಾಂತ್ರೀಕರಣ ಮುಂತಾದವುಗಳಿಂದ ಸೃಷ್ಠಿಯಾದ ಉಷ್ಣಗಾಳಿಯನ್ನು ಉಸಿರಾಡುವಂತಾಯಿತು. ಅರಣ್ಯ ಇಲಾಖೆಯ ಕಾನೂನು ಕಟ್ಟಳೆಗಳಿಗೆ ಹೆದರಿ ಬೇಟೆಯಾಡುವುದಕ್ಕೆ ತಿಲಾಂಜಲಿ ಇಡಬೇಕಾಯಿತು. ನಿಧಾನವಾಗಿ ಆದಿವಾಸಿಗಳ ದೇಹದೊಳಗೆ ಕಲುಷಿತ ನೀರು, ಗಾಳಿ, ಆಹಾರ ರೂಪದಲ್ಲಿ ವಿಷ ಪ್ರವೇಶವಾಗಿ ತನ್ನಷ್ಟಕ್ಕೆ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತ ಬಂತು. ಅವಕಾಶವಾದಿ ರೋಗ ರುಜಿನಗಳ ಪ್ರವೇಶಕ್ಕೆ ದಾರಿಯಾಯಿತು. ಕುಪೋಷಣೆಯ ವಂಶಪಾರಂಪರ್ಯಕ್ಕೆ ಎಡೆಯಾಯಿತು. 

ಕುಪೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮತ್ತು ಅಳಿವಿನಂಚಿನಲ್ಲಿರುವ ಸಮುದಾಯದ ಉಳಿವಿನ ಕಡೆಗೆ ಆಲೋಚನೆ ಮಾಡುವವರು, ಮಾಡಬೇಕಾದವರು, ಆಳುವವರು, ನಿರ್ಣಯಿಸುವವರು, ಸಮಾನ ಮನಸ್ಸು - ಸಮಾನ ಆಸಕ್ತಿಯೊಂದಿಗೆ ಧ್ಯೇಯ ಬದ್ಧತೆಗಳಲ್ಲಿ ಕಾರ್ಯನಿರ್ವಹಣೆ ಸಾಧ್ಯವಾದರೆ ಕುಪೋಷಣೆಯನ್ನು ತಡೆಗಟ್ಟಬಹುದು, ನಿಯಂತ್ರಿಸಬಹುದು ಮತ್ತು ಅಳಿವಿನಂಚಿನಲ್ಲಿರುವ ಒಂದು ಸಮುದಾಯವನ್ನು ಉಳಿಸಬಹುದು. 'ಕುಪೋಷಣೆಯೇ ಭಾರತವನ್ನು ಬಿಟ್ಟು ತೊಲಗು...' ಜಾಗೃತಿ ಮನೆ ಮನೆಗಳನ್ನು, ಮನ ಮನಗಳನ್ನು ತಟ್ಟಬೇಕು...
- ಹೃದಯ

Wednesday 8 January 2014

ಸಮಾಜದ 'ವಿಭಾಜಕ ದೃಷ್ಠಿ'ಯಿಂದಾಗಿ ಪ್ರತ್ಯೇಕಿಸಲ್ಪಟ್ಟ ಕೊರಗರು...

ಕೊರಗರು ಮೂಲತಃ ಅರಣ್ಯವಾಸಿಗಳು. ಪೂರ್ವಕಾಲದಲ್ಲಿ ದಟ್ಟಾರಣ್ಯದಲ್ಲಿ ವಾಸಿಸುತ್ತಿದ್ದರು. ಕಾಡಿನಲ್ಲಿ ದೊರೆಯುವ ಬಿದಿರು, ಬಿಳಲುಗಳಿಂದ - ತಮ್ಮ ನೈಪುಣ್ಯತೆಯನ್ನು ಬಳಸಿ, ವಿವಿಧ ರೀತಿಯ ಪರಿಕರಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಬುಟ್ಟಿ ಹೆಣೆಯುವುದು, ಬೇಟೆಯಾಡುವುದು ಮತ್ತು ಅರಣ್ಯೊತ್ಪನ್ನಗಳನ್ನು ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಸುಶ್ರಾವ್ಯವಾಗಿ ಡೋಲು ಬಾರಿಸುವುದು, ಕೊಳಲು ಊದುವುದು ಸಾಂಸ್ಕ್ರತಿಕ ಮತ್ತು ಮನೋರಂಜನಾತ್ಮಕ ಕಲೆಯಾಗಿತ್ತು. ತನ್ನದೇ ಆದ ಶ್ರೇಷ್ಠ ಸಂಪ್ರದಾಯ ಮತ್ತು ಜೀವನ ಕ್ರಮಗಳನ್ನು ಮೈಗೂಡಿಸಿಕೊಂಡಿದ್ದರು. ವಿಶಿಷ್ಟ 'ಕೊರ್ರು' (ಕೊರಗ) ಭಾಷೆ ಮತ್ತು ಕಾಡಿನ ಸಂಸ್ಕ್ರತಿಯಿಂದಾಗಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದರು. ಮೈಯನ್ನು ಪ್ರಾಣಿಗಳ ಚರ್ಮ ಮತ್ತು ಸೊಪ್ಪಿನಿಂದ ಮುಚ್ಚಿಕೊಳ್ಳುತ್ತಿದ್ದರು (ಆ ಕಾಲದಲ್ಲಿ ಕಾಡಿನಲ್ಲಿ ಕೊರಗರಿಗೆ ಮಾನ ಮುಚ್ಚಿಕೊಳ್ಳಲು ಅದೊಂದೇ ಆಧಾರವಾಗಿತ್ತು) ಕುಳ್ಳಗಿನ ಧೃಡಕಾಯ ದೇಹ, ಭೀತಿ ಹುಟ್ಟಿಸುವ ಮೈಯ ಕಪ್ಪು ಬಣ್ಣ, ಮೂಗು - ತುಟಿ - ಕಣ್ಣಿನ ವಿಭಿನ್ನ ಆಕೃತಿ ಮತ್ತು ಇತರ ಜನವರ್ಗದವರು ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಭಾಷಾ ಭಿನ್ನತೆಯಿಂದಾಗಿ ಕೊರಗರನ್ನು ದೂರವೇ ಇರಿಸಲಾಗಿತ್ತು. ದೂರವೇ ಇದ್ದ ಕೊರಗರು ನಿಧಾನವಾಗಿ ತಮ್ಮ ವೇಷಭೂಷಣಗಳಿಂದಾಗಿ ಅಸ್ಪ್ರಷ್ಯರೇ ಆಗಿಬಿಟ್ಟರು. ವೇದಗಳ ಕಾಲದಿಂದಲೂ ಅಸ್ಪ್ರಶ್ಯರಾಗಿದ್ದವರ ಸಾಲಿಗೆ ಕೊರಗರನ್ನೂ ಸೇರಿಸಲಾಯಿತು ಹೀಗೆ ಸ್ಪರ್ಶ ವರ್ಣಗಳ ಅರಿವೇ ಇಲ್ಲದ ಪ್ರತ್ಯೇಕ ಬುಡಕಟ್ಟು ಪಂಗಡವೊಂದು ಸಮಾಜದ 'ವಿಭಾಜಕ ದೃಷ್ಟ'ಯಿಂದಾಗಿ ಅಸ್ಪ್ರಶ್ಯರಾಗಿಬಿಟ್ಟಿರು ಮತ್ತು ಸಮಾಜದ ಮೇಲಿನ ಭಯದಿಂದಾಗಿ ಮುಗ್ಧ ಕೊರಗರು ತಮ್ಮನ್ನು ತಾವು ಅಸ್ಪ್ರಶ್ಯರೆಂದು ಒಪ್ಪಿಕೊಂಡುಬಿಟ್ಟರು!

ಡೋಲಿನ ಸುಶ್ರಾವ್ಯಕ್ಕೆ ಮನ ಸೋತವರ ವ್ಯಭಿಚಾರ...
ಕೊರಗರು ಬೇಟೆಯಾಡಿ ಬಂದ ನಂತರ, ಧಣಿವಾರಿಸಲು ಡೋಲು ಬಾರಿಸಿ, ಕೊಳಲು ಊದಿ ಮನಃ ಶಾಂತಿಯನ್ನು ಪಡೆಯುತ್ತಿದ್ದರು. ಕಾಡಿನಲ್ಲಿ ಕೊರಗರ ಅಬ್ಬರದ ಡೋಲಿನ ಧ್ವನಿಗೆ ಊರ ಅರಸರೂ (ತುಂಡರಸರು ಮತ್ತು ಪಟೇಲರು) ಮನಸೋತರು. ನಿಧಾನವಾಗಿ ಕೊರಗರ ಡೋಲಿನ ಧ್ವನಿ ಕಾಡಿನ ಬದಲು ಪಟೇಲರ ಕಟ್ಟಅಪ್ಪಣೆಯ ಮೇರೆಗೆ ಗುತ್ತಿನ ಮನೆಯ ಹಿತ್ತಲ ಬದಿಯಲ್ಲಿ ಕೇಳಿ ಬರತೊಡಗಿತು. ಊರ ಹಬ್ಬ ಹರಿದಿನಗಳಲ್ಲಿ, ಊರಿನಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊರಗರಿಗೆ ಡೋಲು ಬಾರಿಸಲು ಅನುವು ಮಾಡಿಕೊಡಲಾಯಿತು. ಗುತ್ತುಬರ್ಕೆಯವರ ಕಂಬಳವೂ ಕೊರಗರ ಡೋಲು ಬಡಿತದಿಂದಲೇ ಆರಂಭವಾಗತೊಡಗಿತು. ತಲೆತಲಾಂತರಗಳಿಂದ ಕೃಷಿಕರು ಬೀಜ ಬಿತ್ತುವುದಕ್ಕೂ ಕೊರಗರ ಡೋಲಿನ ಶಬ್ಧದಿಂದಲೇ ಚಾಲನೆ ನೀಡಲು ಆರಂಭಿಸಿದರು. ಅದರಿಂದ ದೊರೆತ ಬಿಟ್ಟಿ ಸಂಬಳವೂ ಕೊರಗರಿಗೆ ವ್ಯವಹಾರದ ಅರಿವಿಲ್ಲದ್ದರಿಂದ ಅಪ್ಯಾಯಮಾನವಾಗತೊಡಗಿತು. ಸಂಖ್ಯಾಬಲದ ಕೊರತೆಯಿಂದ ಕೊರಗರು ಪ್ರತಿರೋಧ ತೋರುವುದನ್ನು ಯಾವತ್ತು ಬಿಟ್ಟರೋ, ಅದಾಗಲೇ ಬಲಿಷ್ಠರ ಅಡಿಯಾಳಾಗಬೇಕಾಯಿತು ಮತ್ತು ಕೊರಗರ 'ಮುಗ್ಧತೆಯನ್ನು ದೌರ್ಬಲ್ಯ'ವೆಂಬಂತೆ ಬಲಿಪಶುಗೊಳ್ಳಲಾಯಿತು. ಅವರನ್ನು ಜೀತಕ್ಕೆ ನೇಮಿಸಿಕೊಳ್ಳಲಾಯಿತು. ಅದನ್ನು ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನುತ್ತಾರೆ ವಿಶಾಲಾರ್ಥದಲ್ಲಿ ಹೇಳುವುದಾದರೆ, 'ಊಳಿಗಮಾನ್ಯ ಪದ್ಧತಿ' ಎನ್ನಬಹುದು.

ಅಂಡೆ, ಕುಂಟು, ಸೊಪ್ಪು ಎಂಬ ವಿಂಗಡನೆ...
ಅಸ್ಪ್ರಶ್ಯತೆ ತಾರತಮ್ಯದ ಪಿಡುಗಿಗೆ ಅಂಟಿಕೊಂಡ ಕೊರಗ ಸಮುದಾಯವು ಅಕ್ಷರ ಕಲಿಯುವಂತಿರಲಿಲ್ಲ. ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮತ್ತು ಕಾಡಿನಿಂದ ಊರಿಗೆ ಬಂದಾಗ ಉಗುಳುವುದನ್ನೂ ನಿಷೇಧಿಸಲಾಗಿತ್ತು!! ಹೀಗಾಗಿ, ಕೊರಗರು ಕಾಡಿನಿಂದ ಊರಿಗೆ ಬಂದಾಗ ಎಂಜಲು ಉಗುಳಲು ತಮ್ಮ ಸೊಂಟಕ್ಕೆ ಬಿದಿರಿನ ಬೊಂಬನ್ನು (ತುಳುವಿನಲ್ಲಿ ಅಂಡೆ ಎನ್ನುತ್ತಾರೆ) ಕಟ್ಟಕೊಳ್ಳುತ್ತಿದ್ದರು. ಇದಕ್ಕೆ ಇವರನ್ನು ಊರಿನ ಇತರ ಜನವರ್ಗದವರು 'ಅಂಡೆ ಕೊರಗರು' ಎಂದು ಕರೆದರು.
ಕಾಡಿನಿಂದ ಊರಿಗೆ ಬಂದು ಅಜಲು ಸೇವೆ ಮಾಡುತ್ತಿದ್ದ ಕೊರಗರಿಗೆ ಸೊಪ್ಪಿನ ಬದಲು ಮಾನ ಮುಚ್ಚಿಕೊಳ್ಳಲು ಊರಿನವರು ಬಟ್ಟೆಯನ್ನು ಕೊಡುತ್ತಿದ್ದರು. ಹೀಗೆ ಬಟ್ಟೆ ತೊಟ್ಟುಕೊಂಡ ಕೊರಗರನ್ನು ಊರಿನ ಇತರ ಜನವರ್ಗದವರು 'ಕುಂಟು ಕೊರಗರು' ಎಂದು ಕರೆದರು (ಕುಂಟು ತುಳು ಪದ; ಬಟ್ಟೆ ಎಂದರ್ಥ). ಕಾಡಿನಲ್ಲಿಯೇ ಇದ್ದು ತನ್ನ ಕೆಲಸವನ್ನು ನಿರ್ವಹಿಸಿಕೊಂಡು, ಬರೇ ಸೊಪ್ಪು ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿ ಬದುಕುತ್ತಿದ್ದವರು 'ಸೊಪ್ಪು ಕೊರಗರು' ಎಂದು ಕರೆಯಲ್ಪಟ್ಟರು. ಕೊರಗರನ್ನು 'ಅಂಡೆ, ಕುಂಟು, ಸೊಪ್ಪು' ಎಂದು ಗುರುತಿಸಿ ಕರೆದದ್ದು ಇತರ ಜನ ವರ್ಗದವರೇ ಹೊರತು, ಸ್ವತಃ ಕೊರಗರಲ್ಲ! ಸಮಾನತೆ ಬಯಸುತ್ತಿದ್ದ ಕೊರಗರು ತಮ್ಮನ್ನು ತಾವು ಈ ರೀತಿ ಎಂದೂ ಗುರುತಿಸಿದ್ದಿಲ್ಲ ಮತ್ತು ಪ್ರತ್ಯೇಕ ಪಂಗಡಗಳನ್ನ ಕಟ್ಟಿಕೊಂಡವರೇ ಅಲ್ಲ. ಇದು ಕೂಡಾ ಸಮಾಜದ ವಿಭಾಜಕ ದೃಷ್ಠಿಯಿಂದಾಗಿ ಉಂಟಾದ ಗೊಂದಲ! ದುರಾದೃಷ್ಟವಶಾತ್, ಎಲ್ಲಾ ಇತಿಹಾಸಕಾರರು, ಸಂಶೋಧಕರು, ಚಿಂತಕರು ಮತ್ತು ಬರಹಗಾರರೂ - ನೈಜತೆಯನ್ನು ವಿಮರ್ಶಿಸದೆ ಕೊರಗರಲ್ಲಿ ಮೂರು ಒಳಪಂಗಡಗಳು ಇದ್ದವೆಂದು, ಹಾಗೆಯೇ ಬರೆದುಬಿಟ್ಟಿದ್ದಾರೆ!
- ಹೃದಯ

Saturday 4 January 2014

'ಕೊರ್ರು'ಗಳು 'ಕೊರಗ'ರಾದ ಕಥೆ!

'ಕೊರ್ರು'ಗಳು 'ಕೊರಗ'ರಾದ ಕಥೆ!
Of the record...

ಏನಿದು 'ಕೊರ್ರು'..?! ಇದೊಂದು ಅವಿಭಜಿತ ಜಿಲ್ಲೆಯ ಪ್ರಾಚೀನ ಆದಿವಾಸಿ - ಬುಡಕಟ್ಟು ಪಂಗಡ. 'ಕೊರ' ಎಂದರೆ ಸೂರ್ಯ ಎಂಬರ್ಥವಿದೆ. ಕೊರ್ರು ಸಮುದಾಯದವರು ಸೂರ್ಯೋಪಾಸಕರೂ ಹೌದು. ಆದ್ದರಿಂದ ಈ ಸಮುದಾಯದವರನ್ನು 'ಸೂರ್ಯವಂಶಸ್ಥ'ರೆನ್ನುತ್ತಾರೆ. ಇತರ ಜನ ವರ್ಗದವರು ಈ ಆದಿವಾಸಿ ಪಂಗಡದ ಜನರನ್ನು ತುಳುವಿನಲ್ಲಿ 'ಕೊರ್ರು-ನಕುಲು' (ಕೊರ್ರುಗಳು ಎಂದು ಅರ್ಥ), 'ಕೊರ್ರುಗೆರ್' (ಕೊರ್ರುಗರು) ಎಂದು ಕರೆದು - ಕರೆದು, ಕಾಲಕ್ರಮೇಣ 'ಕೊರ್ರು' ಎಂಬುದು 'ಕೊರಗ' ಎಂದಾಯಿತು. ಇದು 'ಮಾತನಾಡುವ ಶೈಲಿ'ಯಿಂದಾಗಿ ಜನಾಂಗವೊಂದರ ಮೂಲ ಹೆಸರೇ ಬದಲಾದ ಕಥೆ!! 1907ರಲ್ಲಿ ಇಂಗ್ಲೇಡ್ ಮೂಲದ 'ಥರ್ಸಟನ್' ಎನ್ನುವ ಇತಿಹಾಸಕಾರ, ತನ್ನ 'Ethngraphic Notes in Southern India' ಅನ್ನೋ ಅಧ್ಯಾಯನ ವರದಿಯಲ್ಲಿ (ಭಾಗ-3 ಮತ್ತು 7ರಲ್ಲಿ) 'ಕೊರ್ರು ಸಮುದಾಯ'ವನ್ನು 'ಕೊರಗ ಸಮುದಾಯ'ವೆಂದು ಸ್ಪಷ್ಟಪಡಿಸಿ - ಅಂದಿನ, 'ಮದ್ರಾಸ್ ಸರಕಾರ'ಕ್ಕೆ ಸಲ್ಲಿಸಿದನು. ಅದು, 'ಕೊರ್ರು' ಸಮುದಾಯದ ಕುರಿತಾದ ಸಮಗ್ರ ಅಧ್ಯಯನ ವರದಿಯಾಗಿತ್ತು. ತದಾನಂತರ 'ಕೊರ್ರು' ಎಂಬುದು 'ಕೊರಗ' ಎಂದೇ ಎಲ್ಲಾ ಸರಕಾರಿ ದಾಖಲೆಗಳಲ್ಲೂ ನಮುದಾಯಿತು ಎಂದರೆ ಆಶ್ಚರ್ಯವಾದರೂ ಸತ್ಯ! ಈಗಲೂ ಕೊರಗ ಸಮುದಾಯದ ಹಿರಿಯ ಜೀವಿಗಳು ತಮ್ಮನ್ನು ತಾವು - ಕೊರ್ರು, ಕಾಡಿ (ಎಂದರೆ ಕಾಡಿನವರು; ಕಾಡಿನ ಜನರು) ಎಂದು ವಿನಮ್ರತೆಯಿಂದಲೇ ಒಪ್ಪಿಕೊಳ್ಳುತ್ತಾರೆ.
-
ಹೃದಯ

Wednesday 1 January 2014

ಮೊದಲ ಮಾತು...

ಶತಮಾನ ಶತಮಾನ ಶೋಷಣೆಗೆ ಒಳಗಾಗಿ
ಗತಿಕೆಟ್ಟು ಬದುಕಿದೆವು ಈ ಮಣ್ಣಿನಲ್ಲಿ
ಇತಿಹಾಸ ಉರುಳುತ್ತಿದೆ ಗತಿಚಕ್ರ ಹೊರಳುತ್ತಿದೆ
ಮತಿವಂತರಾಗೋಣ ಮುನ್ನಡೆಯಲಿಲ್ಲಿ

(ರಚನೆ: ಅಂಬಾತನಯ ಮುದ್ರಾಡಿ)


ಪ್ರಿಯ ಬಂಧುಗಳೇ...
ನಾವು ಬೆಳೆಯಬೇಕಿದೆ. ಬೆಳೆಯುತ್ತಿದ್ದೇವೆ. ಮುನ್ನಡೆಯಬೇಕಿದೆ... ಇದಕ್ಕೆ ಪ್ರೀತಿಯ ಓದುಗರಾದ ನೀವು ಕಾರಣರಾಗಬೇಕಿದೆ. ನಾವು ನಿಮ್ಮಿಂದ ಬಯಸುವುದು ಪ್ರೀತಿಯ ಅಪ್ಪುಗೆಯನ್ನು ಮತ್ತು ಪ್ರೋತ್ಸಾಹವನ್ನು.

ಸ್ನೇಹ, ಪ್ರೀತಿ, ಅಭಿವೃದ್ಧಿಯ ಸೇತುವೆಯಾಗಿ ಕೆಲಸ ಮಾಡುವುದು ನಮ್ಮ ಆಶಯ. ನಿಮ್ಮ 'ಶೋಷಿತ ಧ್ವನಿ'ಯನ್ನು ಅಧಿಕಾರಸ್ಥರ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕನಸು. ನಿಮ್ಮ ಸಮಸ್ಯೆ, ಸುಖ - ದುಃಖ, ಸಂತೋಷ, ಸಂಭ್ರಮ, ಬೇಸರ, ನೊವು - ನಲಿವು, ನೀವು ಅನುಭವಿಸಿದ ಅವಮಾನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಜನಮಿತ್ರ ಆಗಬೇಕು ಎಂಬುದು ನಮ್ಮ ನೀತಿ.

ಈ ಎಲ್ಲಾ ಕನಸು ಆಶಯಗಳೊಂದಿಗೆ ನಮ್ಮ ಹೊಸ ಅಧ್ಯಾಯ ಆರಂಭಗೊಂಡಿದೆ. ನಾವು ಇಟ್ಟ ಪ್ರತಿ ಹೆಜ್ಜೆಯೂ ಪ್ರಬಲವಾಗಿ ಮೂಡಿ ಬರಬೇಕು. ಆ ಪ್ರತೀ ಹೆಜ್ಜೆ ಗುರುತಿನಲ್ಲೂ ನಮ್ಮವರು ಮುಂದುವರಿಯಬೇಕು. ನಮ್ಮ ನಿಮ್ಮ ನಡುವೆ ಇರುವ ಗೆಳೆತನಕ್ಕೆ ಚ್ಯುತಿ ಬರದಂತೆ ಹೆಜ್ಜೆ ಇಡಬೇಕು. ಇದಕ್ಕೆ ಬೇಕಾಗಿರುವುದು ಎರಡೇ... ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ.

" ನಾನೊಂದು ಮಗು. ನನ್ನ ಬರುವಿಕೆಗಾಗಿ ಇಡೀ ಜಗತ್ತು ಬೆರಗುಗಣ್ಣಿನಿಂದ ಕಾಯುತ್ತಿತ್ತು. ಈಗ ಸಮಸ್ತ ಜನಾಂಗ ನಾನು ಏನಾಗುತ್ತೇನೆಂಬುದನ್ನು ಕುತೂಹಲದಿಂದ ಗಮನಿಸುತ್ತಿದೆ. ಏಕೆಂದರೆ, ನಾನು ಏನಾಗುತ್ತೇನೋ ನಾಳಿನ ನನ್ನ ಜನಾಂಗ ಅದನ್ನೇ ಅನುಸರಿಸುತ್ತದೆ!
ನಾನೊಂದು ಮಗು. ನನ್ನ ಬದುಕು ಭವಿಷ್ಯ ನಿಮ್ಮ ಕೈಯಲ್ಲಿದೆ. ನಾನು ಸೋಲುವೆನೆ ಅಥವಾ ಗೆಲ್ಲುವೆನೆ ಎಂಬುದನ್ನು ನಿರ್ಧರಿಸುವವರು ನೀವೆ. ನನ್ನ ಬೆಳವಣಿಗೆಗೆ ಬೇಕಾದ ಅವಕಾಶಗಳನ್ನು ನೀಡುವಂತೆ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ. ಮುಂದೆ, ಈ ಪ್ರಪಂಚಕ್ಕೆ ನಾನೊಂದು ವರ ವಾಗುವಂತೆ ನನ್ನನ್ನು ಸಜ್ಜುಗೊಳಿಸಲು ನಿಮ್ಮಲ್ಲಿ ವಿನಮ್ರವಾಗಿ ಬೇಡುತ್ತೇನೆ..."
ನಿಮ್ಮ ಪ್ರೀತಿಯ...
- ಜಿ.ಭವಾನಿ ಶಂಕರ ಕೊರಗ
 

Blogger news

Blogroll

About